ಕಾರವಾರ : ಪ್ರವಾಸಕ್ಕೆಂದು ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿಗೆ ಪಲ್ಟಿಯಾಗಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಸೂಳೆಮುರ್ಕಿ ಕ್ರಾಸ್ ಬಳಿ ಗುರುವಾರ (ಸೆ.8) ಅಪಘಾತ (Accident case) ಸಂಭವಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರದ ಪ್ರಾರ್ಥನಾ ಪದವಿ ಮತ್ತು ಪದವಿಪೂರ್ವ ಕಾಲೇಜಿನ 50 ವಿದ್ಯಾರ್ಥಿಗಳು, 8 ಮಂದಿ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ಇಬ್ಬರು ಸದಸ್ಯರು ಸೇರಿ ಒಟ್ಟು 60 ಮಂದಿ ಎಮ್.ಆರ್ ಟೂರ್ಸ್ ಎಂಡ್ ಟ್ರಾವೆಲ್ಸ್ ಬಸ್‌ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದರು.
ಇದನ್ನೂ ಓದಿ | Accident case| ಹಂಪ್ಸ್‌ನಲ್ಲಿ ಹಾರಿ ಉರುಳಿದ ಬೈಕ್, ಹಿಂಬದಿ ಸವಾರ ದಾರುಣ ಸಾವು
ಜೋಗದಿಂದ ಮುರ್ಡೇಶ್ವರಕ್ಕೆ ಆಗಮಿಸುತ್ತಿದ್ದ ವೇಳೆ ಗುರುವಾರ ತಡರಾತ್ರಿ ಹೊನ್ನಾವರದ ಸೂಳೆಮುರ್ಕಿ ಕ್ರಾಸ್ ಹತ್ತಿರ ರಸ್ತೆಯ ತಿರುವಿನಲ್ಲಿ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಲಾಯಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಬಸ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿನ ಕಾಲುವೆಗೆ ಪಲ್ಟಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತಕ್ಕೀಡಾದ ಬಸ್‌ನಲ್ಲಿ ಇನ್ನುಳಿದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಪ್ರತ್ಯೇಕ ವಾಹನದಲ್ಲಿ ಹೊನ್ನಾವರಕ್ಕೆ ಕರೆತಂದ ತಾಲ್ಲೂಕು ಆಡಳಿತ, ಪೊಲೀಸರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ವಸತಿಗೆ ಅನುವು ಮಾಡಿಕೊಟ್ಟಿದೆ. ಹಾಗೂ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಅಪಘಾತ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Accident case | ನರಗುಂದ ಬಳಿ ಬಸ್-ಕಾರು ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು, ಮತ್ತಿಬ್ಬರು ಗಂಭೀರ