Site icon Vistara News

Uttara Kannada News: ಸೂರ್ಯ ವಿದ್ಯಮಾನಗಳ ಅಧ್ಯಯನ ಮಹತ್ವದ ಮೈಲುಗಲ್ಲು: ಇಸ್ರೊ ಮಾಜಿ ಅಧ್ಯಕ್ಷ

Former ISRO Chairman Dr Kiran Kumar was awarded the first Vishnugupta National Award from Raghaveshwara Bharathi swamiji

ಗೋಕರ್ಣ: 15 ಲಕ್ಷ ಕಿಲೋಮೀಟರ್ ದೂರದಲ್ಲಿದ್ದುಕೊಂಡು ಸೂರ್ಯ ವಿದ್ಯಮಾನಗಳ ಅಧ್ಯಯನಕ್ಕೆ ಮುಂದಾಗಿರುವ ಭಾರತದ ಆದಿತ್ಯ-ಎಲ್1 (Aditya-L1) ಯೋಜನೆ ಬಾಹ್ಯಾಕಾಶ ಕ್ಷೇತ್ರದಲ್ಲಿ (Space Field) ಮಹತ್ವದ ಮೈಲುಗಲ್ಲು (Milestone) ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ.ಕಿರಣ ಕುಮಾರ್ ಹೇಳಿದರು.

ಕುಮಟಾ ತಾಲೂಕಿನ ಗೋಕರ್ಣದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಶಿಕ್ಷಕರ ವಸತಿಗಾಗಿ ನಿರ್ಮಿಸಿರುವ 24 ಮನೆಗಳ ಬೋಧಗ್ರಾಮ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿ, ವಿವಿವಿಯಿಂದ ಕೊಡಮಾಡುವ ಮೊಟ್ಟಮೊದಲ ವಿಷ್ಣುಗುಪ್ತ ರಾಷ್ಟ್ರೀಯ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸೂರ್ಯನ ಸುತ್ತಮುತ್ತಲ ಚಲನ ವಲನ, ವಿದ್ಯಮಾನಗಳನ್ನು ಖಗ್ರಾಸ ಸೂರ್ಯಗ್ರಹಣ ನಡೆಯುವ ಸಂದರ್ಭದಲ್ಲಿ ಮಾತ್ರ ಅದು ಎಲ್ಲಿ ಸಂಭವಿಸುತ್ತದೆಯೋ ಅಲ್ಲಿ ಅಧ್ಯಯನ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ ಇದೀಗ ಆದಿತ್ಯ ಎಲ್-1 ಮೂಲಕ 15 ಲಕ್ಷ ಕಿಲೋಮೀಟರ್ ದೂರದಿಂದ ಸೂರ್ಯ ವಿದ್ಯಮಾನಗಳನ್ನು ಅಧ್ಯಯನ ಮಾಡುವ ಯೋಜನೆಗೆ ಭಾರತ ಮುಂದಾಗಿದೆ.

ಇದನ್ನೂ ಓದಿ: G20 Summit 2023: ಭಾರತಕ್ಕೆ ಬಂದಿಳಿದ ಅಮೆರಿಕ ಅಧ್ಯಕ್ಷ! ಮೋದಿ ಜತೆ ಬೈಡೆನ್ ಮಾತುಕತೆ

ಭೂಮಿಗೆ ಸೂರ್ಯನಿಂದ ಬರುವ ಹಾನಿಕಾರಕ ಕಿರಣಗಳನ್ನು ತಡೆಯುವ ಪ್ರಯತ್ನವೂ ನಡೆದಿದೆ. ಮನುಷ್ಯ ಪ್ರಕೃತಿಯ ಜತೆ ಹೊಂದಿಕೊಂಡು ಬದುಕಿದಾಗ ಮಾತ್ರ ಸುಸ್ಥಿರ ಬದುಕು ಸಾಧ್ಯ ಎನ್ನುವುದನ್ನು ನಮ್ಮ ಋಷಿಪರಂಪರೆ ಸಾವಿರಾರು ವರ್ಷಗಳಷ್ಟು ಮೊದಲೇ ನಮಗೆ ತಿಳಿಸಿಕೊಟ್ಟಿತ್ತು ಎಂದು ಅಭಿಪ್ರಾಯಪಟ್ಟರು.

ಪಾಶ್ಚಾತ್ಯ ವಿಜ್ಞಾನದ ಜತೆಗೆ ನಮ್ಮನ್ನು ನಾವು ಗುರುತಿಸಿಕೊಳ್ಳುವ, ತಿಳಿದುಕೊಳ್ಳುವ ಕಾರ್ಯ ಆಗಬೇಕು. ಇದನ್ನೇ ಭಾರತದ ತತ್ವಜ್ಞಾನ, ಆತ್ಮಜ್ಞಾನ ಎಂದು ಕರೆದಿದೆ. ನನ್ನನ್ನು ನಾವು ಗುರುತಿಸಿಕೊಳ್ಳುವಂತೆ ಜ್ಞಾನ ನೀಡುವುದು ಶಿಕ್ಷಣದ ಗುರಿ. ಇದು ಸಾಧನೆಯಾಗಬೇಕಾದರೆ ಗುರುಕುಲ ಶಿಕ್ಷಣವೊಂದೇ ದಾರಿ. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮಹತ್ಸಾಧನೆಗೆ ಮುಂದಾಗಿದ್ದು, ಇದು ದೇಶದಲ್ಲೇ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಆಶಿಸಿದರು.

ಉಪಗ್ರಹ ಆಧರಿತ ಹವಾಮಾನ ಮುನ್ಸೂಚನೆ, ಸಂಪರ್ಕ ಕ್ಷೇತ್ರದ ಕ್ರಾಂತಿಕಾರಕ ಯೋಜನೆಗಳು ಮುಂತಾದ ಮಹತ್ವದ ತಂತ್ರಜ್ಞಾನಗಳ ಮೂಲಕ ಇಸ್ರೋ ದೇಶದ ಬೆಳವಣಿಗೆಗೆ ನೆರವಾಗಿದೆ. ಇದೀಗ ವಿಶ್ವದಲ್ಲೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇಸ್ರೋ ವಿಕ್ರಮ ಸಾಧಿಸಿದೆ ಎಂದರು.

ಇದನ್ನೂ ಓದಿ: PPF Investment : ಪಿಪಿಎಫ್ ಮೊತ್ತದ ಆಧಾರದಲ್ಲಿ ಸಾಲ ಪಡೆಯುವುದು ಹೇಗೆ?

ಪ್ರಪ್ರಥಮ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನ ಪ್ರದಾನ ಮಾಡಿ ಆಶೀರ್ವಚನ ನೀಡಿದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ, “ವಿಜ್ಞಾನದ ಅರ್ಥ ಇಂದು ಸಂಕುಚಿತವಾಗಿದೆ. ಕಲೆಯಲ್ಲೂ ಅಪೂರ್ವ ವಿಜ್ಞಾನ ಇದೆ. ಆಧ್ಯಾತ್ಮವೂ ಒಂದು ವಿಜ್ಞಾನ. ವಿಜ್ಞಾನ ಎಂದರೆ ನಿಜ ಅರ್ಥದಲ್ಲಿ ವಿಶೇಷವಾದ, ಆಳವಾದ ಜ್ಞಾನ. ಇದು ನಮ್ಮನ್ನು ನಾವು ತಿಳಿದುಕೊಳ್ಳುವಲ್ಲಿಂದ ಆರಂಭವಾಗುತ್ತದೆ ಎಂದು ವಿಶ್ಲೇಷಿಸಿದರು.

“ನಾವು ಒಂದು ಎಲೆಕ್ಟ್ರಾನಿಕ್ ಉಪಕರಣ ಅಥವಾ ಮೊಬೈಲ್ ತೆಗೆದುಕೊಂಡಾದ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಕೈಪಿಡಿ ಹೇಗೆ ಅಗತ್ಯವೋ, ಹಾಗೆ ನಮ್ಮ ದೇಹ ಮನಸ್ಸನ್ನು ಹೇಗೆ ಬಳಸಿಕೊಳ್ಳುವುದು ಎಂದು ತಿಳಿಯಲೂ ಸೂಕ್ತ ಕೈಪಿಡಿ ಬೇಕು. ವಿಜ್ಞಾನಿಗಳು ಹಾಗೂ ಸಂತರು ಒಂದೇ ರೀತಿ ಯೋಚಿಸುತ್ತಾರೆ. ಆಯಾ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ಹೊಂದಿರುವ ಎಲ್ಲರೂ ವಿಜ್ಞಾನಿಗಳೇ ಆಗಿದ್ದಾರೆ. ವಿಜ್ಞಾನದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಜ್ಞಾನ ಪರಂಪರೆ ಬಗ್ಗೆ ಅರಿವು ಇದೆ ಎಂದು ಹೇಳಿದರು.

ಗೋವಾದ ಉದ್ಯಮಿ ಸತೀಶ್ ವಾಘ್ ಮಾತನಾಡಿ, ಸಾಧನೆಯ ಹಾದಿಯಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಸಮಾಜಕ್ಕೆ ನಾವು ಏನು ಕೊಡುಗೆ ನೀಡಬಹುದು ಎನ್ನುವ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ವಿವಿವಿಗೆ ತಮ್ಮ ಜೀವಿತಾವಧಿಯುದ್ದಕ್ಕೂ ಪ್ರತಿ ವರ್ಷ 10 ಲಕ್ಷ ರೂಪಾಯಿ ದೇಣಿಗೆ ನೀಡಿ, ಈ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸುವುದಾಗಿ ತಿಳಿಸಿದರು.

ಡಾ.ಕಿರಣ ಕುಮಾರ್ ಪುತ್ರಿ ಹಾಗೂ ಕಲಾವಿದೆ ಸುಹಾಸಿನಿ ಮಾತನಾಡಿ, ಭಾರತದ ನಾಟ್ಯಶಾಸ್ತ್ರ ಅದ್ಭುತ ವಿಜ್ಞಾನ. ಸಂಸ್ಕೃತದ ಒಂದೊಂದು ಉಚ್ಚಾರದಿಂದಲೂ ವಿಶೇಷ ಫಲ ಪಡೆಯಬಹುದು. ಇಂಥ ಜ್ಞಾನಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿವಿವಿ ಕೊಡುಗೆ ಮಹತ್ವದ್ದು ಎಂದು ಬಣ್ಣಿಸಿದರು.

ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆ ಆರಂಭಕ್ಕೆ ಕ್ಷಣಗಣನೆ! ನಾಳೆ ದಿಲ್ಲಿಯಲ್ಲಿ ವಿಶ್ವನಾಯಕರ ಸಮಾಗಮ

ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಸ್ರೊದ ವಿಶ್ರಾಂತ ವಿಜ್ಞಾನಿ ಪಿ.ಜೆ.ಭಟ್, ಎಂಜಿನಿಯರ್ ಜೀವನ್, ಸ್ಮಿತಾ ವಾಘ್, ಜಿ.ಕೆ.ಹೆಗಡೆ ವೇದಿಕೆಯಲ್ಲಿದ್ದರು.

Exit mobile version