ಕಾರವಾರ: ಪ್ರಸಕ್ತ ಸಾಲಿನ ಕಬ್ಬು (Sugarcane) ಅರೆಯುವ ಹಂಗಾಮು ನವೆಂಬರ್ 1 ರಿಂದ 15ರ ವರೆಗೆ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ (Sugar Factory) ವತಿಯಿಂದ ಜಿಲ್ಲೆಯ ಕಬ್ಬು ಬೆಳೆಗಾರರರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ, ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಜಿಲ್ಲೆಯ ಕಬ್ಬು ಬೆಳಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2022-23 ರಲ್ಲಿ 10,18,382 ಮೆ. ಟನ್ ಕಬ್ಬು ನುರಿಸಲಾಗಿದ್ದು, 1,19,478 ಮೆ.ಟನ್ ಸಕ್ಕರೆ ಉತ್ಪಾದಿಸುವುದರೊಂದಿಗೆ 11.97% ಶೇಕಡಾ ಇಳುವರಿ ದಾಖಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 6,633 ಹೆಕ್ಟೇರ್ ಹೊಸ ಕಬ್ಬು ಹಾಗೂ 8,005 ಹೆಕ್ಟೇರ್ ಕುಳೆ ಕಬ್ಬು ಸೇರಿದಂತೆ ಒಟ್ಟು 14,638 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ.
ಪ್ರಸಕ್ತ ಸಾಲಿನ ಕಬ್ಬು ಬೆಳೆಗೆ ಹಳಿಯಾಳ ತಾಲೂಕಿನ ಇ.ಐ.ಡಿ.ಪ್ಯಾರಿ (ಇಂಡಿಯಾ) ಲಿ ಇವರು ಪ್ರತಿ ಟನ್ ಗೆ ರೂ.3678 ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ನಿಗಧಿಪಡಿಸಿದ್ದಾರೆ. ಜಿಲ್ಲೆಯ ಕಬ್ಬು ಬೆಳಗಾರರಿಂದ ಕಬ್ಬು ಖರೀದಿಸುವ ಸಂದರ್ಭದಲ್ಲಿ ಬೆಳಗಾರರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಪರಸ್ಪರ ಸಮನ್ವಯದಿಂದ ಕಬ್ಬು ಖರೀದಿಯ ಎಲ್ಲಾ ಪ್ರಕ್ರಿಯೆಯನ್ನು ನಡೆಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯ ಇ.ಐ.ಡಿ.ಪ್ಯಾರಿ (ಇಂಡಿಯಾ) ಲಿ ಅವರು ರೈತರು ಕಾರ್ಖಾನೆಗೆ ತರುವ ಕಬ್ಬನ್ನು ತೂಕ ಮಾಡುವಾಗ ಬೆಳಗಾರರು ಮತ್ತು ಕಾರ್ಖಾನೆಯ ನಡುವೆ ಗೊಂದಲಗಳು ಇದ್ದು, ಈ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿ ತೂಕ ಮಾಡುವಂತೆ ಮತ್ತು ತೂಕದ ಪ್ರಮಾಣವನ್ನು ಬೆಳಗಾರರು ನೋಡಲು ಅನುಕೂಲವಾಗುವಂತೆ ಎಲ್ಲಾ ಅಗತ್ಯ ವ್ಯವಸ್ಥೆ ಮಾಡುವಂತೆ ಹಾಗೂ ಮುಂದಿನ ಅವಧಿಯ ವೇಳೆಗೆ ಕಾರ್ಖಾನೆಯ ಪ್ರವೇಶ ದ್ವಾರದಲ್ಲಿಯೇ ತೂಕ ಪರೀಕ್ಷಿಸಲು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ರೈತ ಮುಖಂಡರು, ಇತರೆ ಜಿಲ್ಲೆಯಲ್ಲಿ ಪ್ರತಿ ಟನ್ ಗೆ 772 ದರ ಇದ್ದು, ಜಿಲ್ಲೆಯಲ್ಲಿ 893 ರೂ. ದರ ಇದೆ ಎಂದು ಅಸಮದಾನ ವ್ಯಕ್ತಪಡಿಸಿ, ಹಿಂದಿನ ಆದೇಶದ ಪ್ರಕಾರ ದರ ಪಡೆಯುವಂತೆ ತಿಳಿಸಿದರು. ಈ ಕುರಿತಂತೆ ಕಾರ್ಖಾನೆಯ ಅಧಿಕಾರಿಗಳು ಪರಿಶೀಲಿಸಿ ದರ ಕಡಿಮೆಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕಾರ್ಖಾನೆಗೆ ತೆಗೆದುಕೊಂಡು ಬಂದ ಕಬ್ಬನ್ನು ಕೂಡಲೇ ತೂಕ ಮಾಡದೇ 2-3 ದಿನ ತಡವಾಗಿ ತೂಕ ಮಾಡುವುದರಿಂದ ಕಬ್ಬು ಒಣಗಿ ತೂಕ ಕಡಿಮೆಯಾಗುತ್ತಿದೆ. ಅಲ್ಲದೇ ಪ್ಲಾಂಟೇಷನ್ ಸ್ಲಿಪ್ ಮತ್ತು ಆದ್ಯತಾ ಪಟ್ಟಿ ನೀಡಬೇಕು. ಪ್ರತಿದಿನ ರಿಕವರಿಯನ್ನು ಪಾರದರ್ಶಕವಾಗಿ ತೋರಿಸುವಂತೆ ರೈತರು ಆಗ್ರಹಿಸಿದರು. ಜಿಲ್ಲೆಯ ಕಬ್ಬು ಬೆಳಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಗೊಂದಲ ಮತ್ತು ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಸಕ್ಕರೆ ಕಾರ್ಖಾನೆಯು ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಇದನ್ನೂ ಓದಿ: Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
ಉಳಿದಂತೆ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ 2016-17 ರಲ್ಲಿನ ಎಫ್.ಆರ್.ಪಿ ಮೇಲಿನ ಹೆಚ್ಚುವರಿ ಬಾಕಿ ಮೊತ್ತ ರೂ.305 ರೂಪಾಯಿಗಳನ್ನು ಬೆಳಗಾರರಿಗೆ ಪಾವತಿಸುವಂತೆ ತಿಳಿಸಿದರು. ಈ ಹಿಂದೆ ರೈತರ ಮೇಲೆ ಕಾರ್ಖಾನೆ ದಾಖಲಿಸಿರುವ ಪ್ರಕರಣಗಳ ವಿವರ ಪಡೆದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್, ಇ.ಐ.ಡಿ.ಪ್ಯಾರಿ (ಇಂಡಿಯಾ) ಪ್ರೈ.ಲಿ ವ್ಯವಸ್ಥಾಪಕ ವೆಂಕಟರಾವ್, ಕಬ್ಬು ಬೆಳಗಾರರ ಮುಖಂಡರು ಮತ್ತು ರೈತ ಮುಖಂಡರು ಮತ್ತಿತರರು ಭಾಗವಹಿಸಿದ್ದರು.