Site icon Vistara News

Tiger Attack : ಕರುವಿನ ಹೊಟ್ಟೆ ಬಗೆದು ತಿಂದ ವ್ಯಾಘ್ರ; ಕಾರವಾರದಲ್ಲಿ ಹುಲಿ ಭೀತಿ ಶುರು

Tiger spotted in Karwar Buffalo attacked and killed

ಕಾರವಾರ: ನಗರ ಪ್ರದೇಶ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಹುಲಿ ಚಿರತೆ, ಕಾಡಾನೆ, ಕರಡಿಗಳೆಲ್ಲವೂ ಕಾಣಿಸಿಕೊಳ್ಳುತ್ತಿದೆ. ಆಹಾರ ಅರಸಿ ಕಾಡು ಪ್ರಾಣಿಗಳು (Wild animals Attack) ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಇದು ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಜತೆಗೆ ಕಾಡುಪ್ರಾಣಿಗಳ ಹಾವಳಿಯು (Wild Animals) ರೈತರ ನಿದ್ದೆಗೆಡಿಸಿದೆ. ಸದ್ಯ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ಧರ ಗ್ರಾಮದಲ್ಲಿ ಹುಲಿಯೊಂದು (Tiger Attack) ಪ್ರತ್ಯಕ್ಷಗೊಂಡಿದೆ.

ಮನೆಯಲ್ಲಿ ಕಟ್ಟಿದ್ದ ಎಮ್ಮೆ ಕರುವನ್ನು ಬಲಿ ಪಡೆದಿದೆ. ಮನೋಹರ ಗಾಂವ್ಕರ್ ಎಂಬವರು ಮನೆಯ ಹಿಂಬದಿ ತೋಟದಲ್ಲಿ ಕರುವನ್ನು ಕಟ್ಟಿಹಾಕಿದ್ದರು. ಈ ವೇಳೆ ಹೊಂಚು ಹಾಕಿದ ಹುಲಿಯು ದಾಳಿ ಮಾಡಿ ಕೊಂದು, ಹೊಟ್ಟೆ ಭಾಗ ತಿಂದು ಹೋಗಿದೆ.

ರಾತ್ರಿಯಂದು ಗ್ರಾಮಕ್ಕೆ ನುಗ್ಗಿ ಸಾಕು ಪ್ರಾಣಿಗಳನ್ನು ಕೊಲ್ಲುತ್ತಿದೆ. ಶನಿವಾರ ಬೆಳಗ್ಗೆ ಮನೋಹರ ಮನೆಯವರು ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಮ್ಮೆ ಕರುವನ್ನು ಹುಲಿಯೇ ತಿಂದು ಹೋಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಹುಲಿ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಿದ್ದು, ಅದಷ್ಟು ಬೇಗ ಸೆರೆಹಿಡಿಯುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Peacock meat : ಮಾಂಸಕ್ಕಾಗಿ ವಿಷದ ಕಾಳು ಎಸೆದು ನವಿಲುಗಳ ಕೊಂದರು; ಬೆನ್ನಟ್ಟಿದಾಗ ನದಿಗೆ ಹಾರಿದ ಕಿಡಿಗೇಡಿಗಳು

ತುಮಕೂರಲ್ಲಿ ರಸ್ತೆ ದಾಟುತ್ತಿದ್ದ ಕಡವೆಗೆ ಡಿಕ್ಕಿ ಹೊಡೆದ ವಾಹನ

ತುಮಕೂರು ಜಿಲ್ಲೆಯ ಕೊರಟಗೆರೆ ಬೈಪಾಸ್ ರಸ್ತೆಯಲ್ಲಿ ದಾಟುತ್ತಿದ್ದ ಕಡವೆಗೆ ಅಪರಿಚಿತ ವಾಹನವು ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿ ರಭಸಕ್ಕೆ ಕಡವೆ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಆಹಾರ ಅರಸಿ ಕಾಡಿನಿಂದ ಗ್ರಾಮದ ಕಡೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಡವೆಗೆ ಡಿಕ್ಕಿ ಹೊಡೆದು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆನೇಕಲ್‌ನಲ್ಲಿ ಚಿರತೆ ಪ್ರತ್ಯಕ್ಷ

ಜನನಿಬಿಡ ಪ್ರದೇಶದಲ್ಲಿ ಮತ್ತೆ ಚಿರತೆಯು ಪ್ರತ್ಯಕ್ಷವಾಗುತ್ತಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಚಿರತೆ ಓಡಾಟದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕಳೆದ 15 ದಿನಗಳಿಂದ ಹೆಬ್ಬಗೋಡಿ ವ್ಯಾಪ್ತಿಯಲ್ಲಿರುವ ಕಮಸಂದ್ರ, ಗಟ್ಟಹಳ್ಳಿ, ಗೋಪಸಂದ್ರ, ಹೀಲಲಿಗೆಯಲ್ಲೂ ಕಾಣಿಸಿಕೊಂಡಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಸ್ಥಳೀಯರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Operation Elephant: ಹಾಸನದಲ್ಲಿ ಎರಡೇ ಗಂಟೆಯಲ್ಲಿ ಪುಂಡಾನೆ ಸೆರೆ ಹಿಡಿದ ಅಭಿಮನ್ಯು ಟೀಂ

ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

ಮಂಡ್ಯ ತಾಲೂಕಿನ ಕನ್ನಲಿ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಗ್ರಾಮದ ಶ್ರೀನಿವಾಸ್ ಎಂಬುವವರ ಜಮೀನಿನಲ್ಲಿ ಚಿರತೆಗಳು ಪ್ರತ್ಯಕ್ಷವಾಗಿವೆ. ಗ್ರಾಮಸ್ಥರು ಒಂದು ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ. ಇನ್ನೆರಡು ಮರಿಗಳನ್ನು ತಾಯಿ ಚಿರತೆಯು ಕಚ್ಚಿಕೊಂಡು ಕಬ್ಬಿನಗದ್ದೆಯಲ್ಲೆ ಇದೆ.

ಬೋರಾಪುರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಜಮೀನಿನಲ್ಲಿ ಕಬ್ಬು ಕಟಾವು ವೇಳೆ ಚಿರತೆ ಮರಿಗಳು ಸಿಕ್ಕಿವೆ. ಇನ್ನು ಗ್ರಾಮದ ಯುವಕರೆಲ್ಲರೂ ಚಿರತೆ ಮರಿ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಚಿರತೆ ಸುದ್ದಿ ಹರಿದಾಡುತ್ತಿದ್ದಂತೆ ಚಿರತೆ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.

ಕೊಪ್ಪಳದಲ್ಲಿ ಚಿರತೆ ಭೀತಿ; ಡಂಗುರ ಸಾರಿದ ಗ್ರಾಮಸ್ಥರು

ಕೊಪ್ಪಳ ತಾಲೂಕಿನ ಬಸಾಪುರದ ಗ್ರಾಮಸ್ಥರಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಆತಂಕ ಹೆಚ್ಚಿಸಿದೆ. ಗುಡ್ಡದ ಹತ್ತಿರ ಹೋಗದಂತೆ ಡಂಗುರ ಸಾರಿದ್ದು, ಸಂಜೆ 6 ರಿಂದ 9 ರೊಳಗಾಗಿ ಮನೆ ಸೇರಬೇಕು. ಗುಡ್ಡದಲ್ಲಿ ಚಿರತೆಗಳಿವೆ ಎಂದು ಸಾರುತ್ತಿದ್ದಾರೆ.

ಇತ್ತೀಚಿಗೆ ಗ್ರಾಮದ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಈಗ ಗ್ರಾಮಸ್ಥರೆ ಎಚ್ಚರಿಕೆ ವಹಿಸಲು ನಿರ್ಧರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version