Site icon Vistara News

ಏಕರೂಪ ನಾಗರಿಕ ಸಂಹಿತೆಯಿಂದ ತಾರತಮ್ಯ ನಿರ್ಮೂಲನೆ: ರೋಹಿತ್ ಚಕ್ರತೀರ್ಥ

Karnataka Kesari Jagannathrao Joshi Book released

ಹೊನ್ನಾವರ: ಏಕರೂಪ ನಾಗರಿಕ ಸಂಹಿತೆ ಎಂದರೆ ದೇಶದ ಎಲ್ಲಾ ನಾಗರಿಕರು ಒಂದೇ ರೀತಿಯಲ್ಲಿ ಬದುಕುವುದಕ್ಕೆ ಅವಕಾಶ ಕಲ್ಪಿಸುವುದಾಗಿದೆ ಎಂದು ಲೇಖಕ ರೋಹಿತ್ ಚಕ್ರತೀರ್ಥ ಹೇಳಿದರು.

ಪಟ್ಟಣದ ಶ್ರೀ ಮೂಡಗಣಪತಿ ಸಭಾ ಭವನದಲ್ಲಿ ಶರಾವತಿ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ಆಯೊಜಿಸಿದ್ದ ʼಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಶಿ’ ಪುಸ್ತಕ ಬಿಡುಗಡೆ ಹಾಗೂ ಏಕರೂಪ ನಾಗರಿಕ ಸಂಹಿತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಒಂದೊಂದು ಧರ್ಮಕ್ಕೆ ಒಂದೊಂದು ಕಾನೂನು ಇದೆ. ಮದುವೆ ಮುಂತಾದ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿ ಹಿಂದು, ಜೈನ, ಬೌದ್ಧ ಧರ್ಮಗಳಿಗೆ ಒಂದು ಕಾನೂನಾಗಿದ್ದರೆ, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಯಹೂದಿಗಳಿಗೆ ಬೇರೆ ರೀತಿಯ ಕಾನೂನುಗಳಿವೆ. ಇದರಿಂದ ವಿಭಿನ್ನವಾದ ಸೌಲಭ್ಯಗಳು ಮತ್ತು ಅಸ್ವಾಭಾವಿಕ ಜೀವನ ಶೈಲಿಗಳು ನೆಲೆಯೂರಲು ಕಾರಣವಾಗಿದೆ. ಏಕರೂಪ ನಾಗರಿಕ ಸಂಹಿತೆಯಿಂದ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮ್ಮತಿ ಸೂಚಿಸಬೇಕಾಗಿದೆ ಎಂದರು.

ಪ್ರಾಂಶುಪಾಲ ಡಾ. ಜಿ.ಎಸ್.ಹೆಗಡೆ ಮಾತನಾಡಿ, ಲೇಖಕರಾದ ತಿಮ್ಮಣ್ಣ ಭಟ್ ಅವರು ಬರೆದ ಜಗನ್ನಾಥ ರಾವ್ ಜೋಶಿ ಅವರ ಜೀವನದ ಕುರಿತ ಪುಸ್ತಕವನ್ನು ಅಯೋಧ್ಯ ಪ್ರಕಾಶನವು ಪ್ರಕಟಿಸಿದೆ. ಇದರಿಂದ ಎಲ್ಲರೂ ಜಗನ್ನಾಥ ರಾವ್ ಅವರ ಆದರ್ಶಪ್ರಾಯವಾದ ಜೀವನ ಶೈಲಿಯನ್ನು ಅರಿಯಲು ಅವಕಾಶ ದೊರೆತಿದೆ ಎಂದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ; ಪರಿಹಾರ ಕಾರ್ಯಾಚರಣೆ ಚುರುಕುಗೊಳ್ಳಲಿ

ಶಾಸಕ ದಿನಕರ ಶೆಟ್ಟಿ `ಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಶಿ’ ಅವರ ಪುಸ್ತಕ ಬಿಡುಗಡೆಗೊಳಿಸಿದರು. ಶರಾವತಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಜಿ.ವಿ.ಭಟ್, ಸರ್ವೋತ್ತಮ ನಾಯ್ಕ ಉಪಸ್ಥಿತರಿದ್ದರು.

Exit mobile version