ಯಲ್ಲಾಪುರ: ಕನ್ನಡದ (Kannada) ಕಲೆಯನ್ನು ಬೆಳೆಸುವ ಕಾರ್ಯಕ್ರಮವೇ ಸಂಕಲ್ಪ ಉತ್ಸವ. ರಾಜ್ಯೋತ್ಸವದ (Rajyotsava) ಶುಭದಿನದಂದು ಈ ಕಾರ್ಯಕ್ರಮಕ್ಕೆ ಚಾಲನೆ ದೊರೆತಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಗಾಂಧಿ ಕುಟೀರದಲ್ಲಿ ಬುಧವಾರ ಸಂಜೆ 37ನೇ ಸಂಕಲ್ಪ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳ ಬಗ್ಗೆ ಆಲೋಚಿಸದೆ, ಹಿಂದೆ ಆಗಿರುವುದರ ಕುರಿತು ಚಿಂತಿಸದೆ, ವರ್ತಮಾನದ ಕಾಯಕದಲ್ಲಿ ಸಂಪೂರ್ಣ ಮನಸ್ಸನ್ನು ತೊಡಗಿಸಿಕೊಂಡು ಹೋದಾಗ ಮಾತ್ರ ಜೀವನದಲ್ಲಿ ಉನ್ನತೀಕರಣ ಸಾಧ್ಯ. ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಎಲ್ಲವುಗಳೂ ಸಹ ಈ ವೇದಿಕೆಯ ಮೇಲೆ ಸಮ್ಮೇಳನಗೊಳ್ಳುತ್ತದೆ. ಕಲೆಯ ಪೋಷಣೆಯ ಈ ಕಾರ್ಯಕ್ರಮ ಇನ್ನಷ್ಟು ಯಶಸ್ವಿಯಾಗಿ ಜರುಗಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಲಾಭದ ಯಾವುದೇ ಅಪೇಕ್ಷೆಯಿಲ್ಲದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ವಿಶೇಷವಾಗಿದೆ. ಪ್ರಮೋದ ಹೆಗಡೆ ಅವರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲೆಮರೆಯ ಕಾಯಿಯಂತಿದ್ದ ಅನೇಕ ಕಲಾವಿದರನ್ನು ಬೆಳೆಸಲು ಸಹಕಾರಿಯಾಗಿದ್ದಾರೆ.
ಇದನ್ನೂ ಓದಿ: Actor Rishi: ರಿಷಿ ಮುಡಿಗೇರಿದ ಒಟಿಟಿ ಅವಾರ್ಡ್!
ಒಬ್ಬ ಕಲಾವಿದನಿಗೆ ಸರಿಯಾದ ವೇದಿಕೆ ದೊರೆತಾಗ ಆತನ ಕುಟುಂಬದಿಂದ ಸಾಂಸ್ಕೃತಿಕ ಕಲೆಯ ಕುಡಿಗಳು ಬೆಳೆಯುತ್ತವೆ. ಅಂತಹ ಅನೇಕ ಕಲಾವಿದರಿಗೆ ಸಂಕಲ್ಪ ಸೇವಾ ಸಂಸ್ಥೆ ವೇದಿಕೆ ನೀಡಿದೆ. ಈ ಕಲಾ ಸೇವೆಯ ಕಾರ್ಯಕ್ರಮ ಇನ್ನಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಮುಂದುವರೆಯಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಗಾಗಿ ನಾಗೇಶ ಯಲ್ಲಾಪುರಕರ ಹಾಗೂ ರಾಮು ನಾಯ್ಕ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ನ.05 ರವರೆಗೆ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನಗರ ಸೀಮಾ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ , ವಿ.ಹಿಂ.ಪ. ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ ಏಕಾನ್, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಪ್ರಶಾಂತ ಹೆಗಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Money Guide : ನಿವೃತ್ತಿ ಬಳಿಕ ಹಣದ ಚಿಂತೆ; ಈ 10 ಟಿಪ್ಸ್ ಪಾಲಿಸಿದರೆ ನೋ ಟೆನ್ಷನ್!
ಪದ್ಮಾ ಪ್ರಮೋದ ಹೆಗಡೆ ಪ್ರಾರ್ಥಿಸಿದರು. ಆಶಾ ಬಗನಗದ್ದೆ ಸ್ವಾಗತಗೀತೆ ಹಾಡಿದರು. ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಭಟ್ ಬರಗದ್ದೆ ನಿರೂಪಿಸಿದರು. ದತ್ತಾತ್ರೇಯ ಕಣ್ಣಿಪಾಲ ವಂದಿಸಿದರು.