Site icon Vistara News

Uttara Kannada News: ಯಲ್ಲಾಪುರದಲ್ಲಿ ಕರ್ನಾಟಕ ರಾಜ್ಯೋತ್ಸವ

68th Karnataka Rajyotsava celebration in Yallapur

ಯಲ್ಲಾಪುರ: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಬುಧವಾರ ತಾಲೂಕಾ ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು (Karnataka Rajyotsava) ಆಚರಿಸಲಾಯಿತು.

ಶಾಸಕ ಶಿವರಾಮ ಹೆಬ್ಬಾರ್‌, ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳಾದ ಶುಭ ಸಂದರ್ಭದಲ್ಲಿ ನಾವಿದ್ದೇವೆ. ನಾವೆಲ್ಲ ಕನ್ನಡ ಭಾಷೆಯನ್ನು, ಕನ್ನಡದ ನೆಲವನ್ನು ಅತ್ಯಂತ ಶ್ರದ್ಧೆಯಿಂದ ಪ್ರೀತಿಸಬೇಕು.

ಇತರ ಭಾಷೆಗಳು ನಮಗೆ ಜೀವನ ನಡೆಸಲು ಅತ್ಯವಶ್ಯಕ. ಅವುಗಳನ್ನು ಕಲಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಮ್ಮ ಮಾತೃ ಭಾಷೆ, ನಮ್ಮ ಹಿರಿಮೆಯನ್ನು ಹೆಚ್ಚಿಸಿರುವಂತಹ ಕನ್ನಡಕ್ಕೆ ನಮ್ಮ ಜೀವನದ ಅಂತಿಮ ಕ್ಷಣದವರೆಗೆ ಗೌರವವನ್ನು ನೀಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಲಂಕಾ ಪಂದ್ಯಕ್ಕೂ ಮುನ್ನ ತಂಡ ಸೇರಲಿದ್ದಾರೆ ಹಾರ್ದಿಕ್​ ಪಾಂಡ್ಯ ಆದರೆ…

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಕನ್ನಡದ ಗರಿಮೆಯನ್ನು ಹೆಚ್ಚಿಸುವ ಹಾಡುಗಳನ್ನು ಹಾಡಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು, ಕನ್ನಡ ನಾಡಿನ ವೀರರ ವೇಷಭೂಷಣವನ್ನು ತೊಟ್ಟು ಸ್ಥಬ್ದಚಿತ್ರಗಳಲ್ಲಿ ಭಾಗವಹಿಸಿದ್ದರು.

ಕನ್ನಡ ಪರ ಘೋಷಣೆಗಳನ್ನು ಕೂಗುತ್ತ ಭಾಗವಹಿಸಿದ್ದ ನೂರಾರು ಜನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ನಂತರ ಪಟ್ಟಣದ ಗಾಂಧಿ ಕುಟೀರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇದನ್ನೂ ಓದಿ: Operation Leopard : ಆಪರೇಷನ್‌ ಸಕ್ಸಸ್‌; 3 ದಿನದಿಂದ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಗುರುರಾಜ್‌ ಎಂ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್‌, ಪ.ಪಂ. ಮುಖ್ಯಾಧಿಕಾರಿ ಸುನಿಲ ಗಾವಡೆ, ಪಂ.ರಾಜ್‌ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸಿಪಿಐ ರಂಗನಾಥ ನೀಲಮ್ಮನವರ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಪ್ರಮುಖರಾದ ಎಂ. ಆರ್‌. ಹೆಗಡೆ ಕುಂಬ್ರಿಗುಡ್ಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Exit mobile version