Site icon Vistara News

Uttara Kannada News: ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕಿದೆ ಎಂಬ ಬ್ಯಾನರ್‌ ಪ್ರದರ್ಶಿಸಿದ ವಿದ್ಯಾರ್ಥಿಗಳು

68th Karnataka Rajyotsava celebrations at Karwar

ಕಾರವಾರ: ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎನ್ನುವ ಆಗ್ರಹ ಈ ಹಿಂದಿನಿಂದಲೂ ಇದ್ದು, ಇದಕ್ಕಾಗಿ ಸಾಕಷ್ಟು ಬಾರಿ ಜಿಲ್ಲೆಯ ಜನತೆ ಪ್ರತಿಭಟನೆ (Protest) , ಹೋರಾಟಗಳನ್ನು ನಡೆಸುವ ಮೂಲಕ ಸರ್ಕಾರಗಳ (Governments) ಗಮನಸೆಳೆಯುವ ಪ್ರಯತ್ನ ನಡೆಸಲಾಗಿದೆ, ಇದಕ್ಕೆ ಸೇರ್ಪಡೆ ಎನ್ನುವಂತೆ ಇದೀಗ ವಿದ್ಯಾರ್ಥಿಗಳು ತಮ್ಮ ನೃತ್ಯದ (Dance) ಮೂಲಕ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ನಡೆದ 68ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ನೃತ್ಯ ಪ್ರದರ್ಶನ ನೀಡಿದ ಹಿಂದೂ ಹೈಸ್ಕೂಲ್‌ನ ವಿದ್ಯಾರ್ಥಿಗಳ ತಂಡ ತಮ್ಮ ನೃತ್ಯದ ಮೂಲಕ ಉತ್ತರಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಅಗತ್ಯವಿದೆ ಎಂದು ಬ್ಯಾನರ್ ಪ್ರದರ್ಶಿಸುವ ಮೂಲಕ ಸಚಿವರ ಮುಂದೆ ವಿಭಿನ್ನವಾಗಿ ತಿಳಿಸುವ ಕಾರ್ಯ ಮಾಡಿದರು.

ವಿದ್ಯಾರ್ಥಿಗಳು ನೃತ್ಯದ ವೇಳೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಬ್ಯಾನರ್ ಪ್ರದರ್ಶಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹಾಗೂ ಅಧಿಕಾರಿಗಳ ಮುಂದೆ ಮಕ್ಕಳು ಮನವಿ ಮಾಡಿಕೊಂಡರು.

ಇದನ್ನೂ ಓದಿ: Operation Leopard : ಆಪರೇಷನ್‌ ಸಕ್ಸಸ್‌; 3 ದಿನದಿಂದ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

ಈ ಕುರಿತು ವಿಸ್ಯಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ ನೃತ್ಯ ಸಂಯೋಜಕ, ಸ್ಟಾರ್ ಚಾಯ್ಸ್ ಡ್ಯಾನ್ಸ್ ಕ್ಲಾಸ್‌ನ ರಾಜನ್ ಬಾನಾವಳಿಕರ್, ಕಳೆದ ಹಲವಾರು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ನಾವು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಇದುವರೆಗೆ ಯಾವುದೇ ಸರ್ಕಾರದಿಂದ ನಮಗೆ ಆಸ್ಪತ್ರೆ ವ್ಯವಸ್ಥೆಯಾಗಿಲ್ಲ. ಹೀಗಾಗಿ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಅಗತ್ಯತೆ ಇದೆ ಎನ್ನುವುದನ್ನು ನೃತ್ಯ ರೂಪಕದ ಮೂಲಕ ಪ್ರದರ್ಶನ ಮಾಡಲಾಯಿತು.‌ ಇದಕ್ಕೆ ಶಾಲೆಯ ಶಿಕ್ಷಕ ವೃಂದ ಹಾಗೂ ಪಾಲಕರೂ ಸಹಕರಿಸಿದ್ದು, ಈ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾಗಿ ಅವರು ತಿಳಿಸಿದರು.

ಇದನ್ನೂ ಓದಿ: ಲಂಕಾ ಪಂದ್ಯಕ್ಕೂ ಮುನ್ನ ತಂಡ ಸೇರಲಿದ್ದಾರೆ ಹಾರ್ದಿಕ್​ ಪಾಂಡ್ಯ ಆದರೆ…

ಇನ್ನು ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಸರ್ಕಾರ ಬಂದ ಆರು ತಿಂಗಳಿನಿಂದ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುವುದಕ್ಕಾಗಿಯೇ ನಾವು ಪ್ರಯತ್ನಿಸುತ್ತಿದ್ದೇವೆ. ಮೊದಲು ಇಲ್ಲಿನ ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಟ್ರಾಮಾ ಸೆಂಟರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಇದರೊಂದಿಗೆ ಚುನಾವಣೆ ಮೊದಲು ಭರವಸೆ ನೀಡಿದಂತೆ ಸರ್ಕಾರ ಮಾಡದಿದ್ದಲ್ಲಿ ಸ್ವತಃ ಆಸ್ಪತ್ರೆ ನಿರ್ಮಿಸಲೂ ತಾನು ಸಿದ್ಧನಿದ್ದೇನೆ. ಆದರೆ ಐದು ವರ್ಷದಲ್ಲಿ ಹಾಳಾಗಿದ್ದನ್ನು ಐದು ತಿಂಗಳಲ್ಲಿ ಹೇಗೆ ಮಾಡುವುದು? ಸ್ವಲ್ಪ‌ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.

Exit mobile version