Site icon Vistara News

Uttara Kannada News: ಟಿವಿಗಳಲ್ಲಿ ಅನುಮತಿ ಇಲ್ಲದೆ ಚುನಾವಣಾ ಜಾಹೀರಾತು ಪ್ರಸಾರ ಕೂಡದು: ಡಿಸಿ

A meeting of local cable TV operators of the district at Karwar dc office

ಕಾರವಾರ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಕೇಬಲ್ ಟಿವಿಗಳಲ್ಲಿ (Cable TV) ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಜಾಹೀರಾತು ಪ್ರಕಟಿಸಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ (Uttara Kannada News) ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೊ ಸಂವಾದದ ಮೂಲಕ ನಡೆದ ಜಿಲ್ಲೆಯ ಸ್ಥಳೀಯ ಕೇಬಲ್ ಟಿವಿ ಆಪರೇಟರ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಬಲ್ ಟಿವಿಗಳಲ್ಲಿ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ನಿರಂತರವಾಗಿ ಸುದ್ದಿ ಮತ್ತು ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು, ಸೂಕ್ತ ಅನುಮತಿ ಇಲ್ಲದೇ ಜಾಹೀರಾತು ಪ್ರಸಾರ ಮಾಡುವುದು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ವ್ಯಾಪ್ತಿಗೆ ಬರಲಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿಗಳು, ಜಾಹೀರಾತುಗಳು ನೀತಿ ಸಂಹಿತೆಯ ವ್ಯಾಪ್ತಿಯಲ್ಲಿ ಇರಬೇಕು ಎಂದರು.

ಇದನ್ನೂ ಓದಿ: INSAT-3DS Launch: ಇಂದು ಇಸ್ರೋದ ಹವಾಮಾನ ಉಪಗ್ರಹ ಉಡಾವಣೆ; ಲೈವ್‌ಸ್ಟ್ರೀಮಿಂಗ್‌ ಇಲ್ಲಿ ಲಭ್ಯವಿದೆ, ನೋಡಿ

ಅಲ್ಲದೇ ಕೇಬಲ್ ವಾಹಿನಿಗಳಲ್ಲಿ ಯಾವುದೇ ಆಧಾರವಿಲ್ಲದೇ ವಿವಿಧ ಧರ್ಮ, ಜನಾಂಗ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಳ ಅಥವಾ ಜಾತಿ ನಡುವೆ ವೈಷಮ್ಯದ ಅಥವಾ ವೈರತ್ವದ ಭಾವನೆಗಳಿದ್ದಲ್ಲಿ ಅವುಗಳನ್ನು ಪ್ರಸಾರ ಮಾಡಬಾರದು, ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾರ್ಯಕ್ರಮದ ಕಾಯಿದೆಗಳು ಮತ್ತು ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು.

ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ಚುನಾವಣೆ ಕುರಿತ ಕರಪತ್ರಗಳನ್ನು ಪ್ರಕಟಿಸುವಾಗ ಚುನಾವಣಾ ಆಯೋಗ ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು, ಕರಪತ್ರದಲ್ಲಿ ಮುದ್ರಕರು ಮತ್ತು ಪ್ರಕಾಶಕರ ಹೆಸರು, ವಿಳಾಸ ಹಾಗೂ ಮುದ್ರಿಸಿದ ಪ್ರತಿಗಳ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು ಎಂದು ಸೂಚಿಸಿದರು.

ಮೊಬೈಲ್ ನೆಟ್‌ವರ್ಕ್ ಸೇವೆಗಳನ್ನು ಒದಗಿಸುವ ಕಂಪನಿಗಳು, ತಮ್ಮ ಸಂಸ್ಥೆಯ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪರವಾದ ಗುಂಪು ಸಂದೇಶಗಳು, ವಾಯ್ಸ್ ಮೆಸೇಜ್‌ಗಳು, ಜಾಹೀರಾತುಗಳ ಕುರಿತಂತೆ ಹಾಗೂ ಸೋಷಿಯಲ್ ಮೀಡಿಯಾಗಳಾದ ವಾಟ್ಸ್‌ಆ್ಯಪ್, ಎಕ್ಸ್, ಇನ್ಸ್ಟಾಗ್ರಾಂ, ಫೇಸ್‌ಬುಕ್ ಗಳಲ್ಲಿ ಪ್ರಕಟವಾಗುವ ಸಂದೇಶಗಳು ಹಾಗೂ ಸಾರ್ವಜನಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂದೇಶಗಳ ಬಗ್ಗೆ ನಿರಂತರವಾಗಿ ನಿಗಾವಹಿಸಿ, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಇದನ್ನೂ ಓದಿ:HSRP Number Plate ಅಪ್ಲೈ ಮಾಡುವಾಗ ಹುಷಾರ್‌; ನಕಲಿ ಲಿಂಕ್‌ಗಳಿಂದ ಮೋಸ ಹೋಗದಿರಿ!

ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆ ನಡೆಸಲು ಅಡ್ಡಿಯಾಗಬಹುದಾದ ಎಲ್ಲ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಕುರಿತಂತೆ ಎಲ್ಲ ಇಲಾಖೆಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಹಾಗೂ ಚುನಾವಣೆಯ ಯಶಸ್ಸಿಗೆ ಸಾರ್ವಜನಿಕರು ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಡಾ. ಆನಂದಸಾ, ಆನಂದಸಾ ಹಬೀಬ ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್ ಮತ್ತು ಜಿಲ್ಲೆಯ ವಿವಿಧ ಕೇಬಲ್ ಟಿವಿ ಆಪರೇಟರ್‌ಗಳು ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಉಪಸ್ಥಿತರಿದ್ದರು.

ಸಂಶಯಾತ್ಮಕ ನಗದು ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ

ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ತಮ್ಮ ಶಾಖೆಗಳಲ್ಲಿ ಪ್ರತೀ ದಿನ ಕಂಡುಬರುವ ಸಂಶಯಾತ್ಮಕ ನಗದು ವ್ಯವಹಾರಗಳ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಡಿಸಿ ಗಂಗೂಬಾಯಿ ಮಾನಕರ್‌ ಸೂಚಿಸಿದರು.

ನಗರದ ಡಿಸಿ ಕಚೇರಿಯಲ್ಲಿ ವಿಡಿಯೊ ಸಂವಾದದ ಮೂಲಕ ನಡೆದ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್‌ಗಳಲ್ಲಿ 1 ಲಕ್ಷಕ್ಕೂ ಅಧಿಕ ಮೊತ್ತದ ನಗದು ಠೇವಣಿ ಮತ್ತು ನಗದು ಹಿಂಪಡೆಯುವ ಸಂಶಯಾತ್ಮಕ ಪ್ರಕರಣಗಳ ಕುರಿತಂತೆ ಬ್ಯಾಂಕ್ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ, ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಲ್ಲದೇ ಯುಪಿಐ ಹಣ ವರ್ಗಾವಣೆಗಳ ಮತ್ತು ಆರ್.ಟಿ.ಜಿ.ಎಸ್ ಹಣ ವರ್ಗಾವಣೆಗಳ ಬಗ್ಗೆಯೂ ಸಹ ನಿರಂತರವಾಗಿ ನಿಗಾವಹಿಸಿರಬೇಕು ಎಂದರು.

ಅಕ್ರಮ ಮತ್ತು ಸಂಶಯಾತ್ಮಕ ಹಣ ವರ್ಗಾವಣೆಯ ಮೂಲಕ ಚುನಾವಣೆಯಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡುವುದನ್ನು ತಡೆಯುವ ಉದ್ದೇಶದಿಂದ ಎಲ್ಲ ಬ್ಯಾಂಕ್‌ಗಳು ಅತ್ಯಂತ ಹೆಚ್ಚಿನ ಜವಾಬ್ದಾರಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ತಿಳಿಸಿದರು.

ಎಲ್ಲಾ ಬ್ಯಾಂಕ್‌ಗಳು ತಮ್ಮ ಎಟಿಎಂಗಳಿಗೆ ಹಣ ತುಂಬುವ ವಾಹನಗಳ ಸಾಗಾಟದ ಕುರಿತ ಇರುವ ಪ್ರಾಮಾಣೀಕೃತ ಕಾರ್ಯ ವಿಧಾನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಇತರೆ ಶಾಖೆಗಳಿಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾವತಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ: IND vs ENG: 4 ವಿಕೆಟ್​ ಕಿತ್ತು ವಿಶೇಷ ದಾಖಲೆ ಬರೆದ ಮೊಹಮ್ಮದ್​ ಸಿರಾಜ್

ಸಭೆಯಲ್ಲಿ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಡಾ. ಆನಂದಸಾ ಹಬೀಬ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಇದ್ದರು.

Exit mobile version