ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನೈಋತ್ಯ ಮುಂಗಾರಿನ ಹಂಗಾಮಿನಲ್ಲಿ ಮಳೆ ಕೊರತೆಯಿಂದ ತಲೆದೋರಿದ ಬರದಿಂದ, ಜೀವನೋಪಾಯಕ್ಕೆ ತೀವ್ರವಾಗಿ ತೊಂದರೆಯಾಗಿರುವ ಹಾಗೂ ಮುಂಗಾರು ಬರದಿಂದ ಈಗಾಗಲೇ ಬೆಳೆ ಹಾನಿ ಪರಿಹಾರ ಪಡೆದಿರುವ ರೈತ ಕುಟುಂಬಗಳ ಪೈಕಿ ಮಳೆಯಾಶ್ರಿತ/ಒಣಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳೆಂದು ಗುರುತಿಸಲಾಗಿರುವ 48,487 ರೈತ ಕುಟುಂಬಗಳಿಗೆ ತಲಾ ಗರಿಷ್ಠ ರೂ.2874 ರಂತೆ ಜಿಲ್ಲೆಗೆ (Uttara Kannada News) ಒಟ್ಟು 13.93 ಕೋಟಿ ರೂ ಜೀವನೋಪಾಯ ಪರಿಹಾರದ ನೆರವು ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಕೊಂಡಿರುವ ರೈತ ಕುಟುಂಬಗಳ ಪೈಕಿ, ಮಳೆಯಾಶ್ರಿತ/ಒಣಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳೆಂದು ಗುರುತಿಸಲಾಗಿರುವ ರೈತರಿಗೆ ಈ ಜೀವನೋಪಾಯ ಪರಿಹಾರದ ನೆರವು ನೀಡುವಂತೆ ಜಿಲ್ಲಾಧಿಕಾರಿಗಳ ಮೂಲಕ, ಈ ಎಲ್ಲಾ ಅರ್ಹ ರೈತರ ಪಟ್ಟಿಯನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಸಲ್ಲಿಕೆಯಾಗಿರುವ ಈ ಎಲ್ಲಾ ರೈತರಿಗೆ ಶೀಘ್ರದಲ್ಲಿಯೇ ಪರಿಹಾರದ ಮೊತ್ತವು ಕೈ ಸೇರಲಿದ್ದು, ಮೊತ್ತವು ರೈತರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗಲಿದೆ.
ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ
ರಾಜ್ಯದಲ್ಲಿ ಬರದಿಂದಾಗಿ ಜೀವನೋಪಾಯಕ್ಕೆ ತೀವ್ರವಾಗಿ ತೊಂದರೆಯಾಗಿದ್ದ ರಾಜ್ಯಾದ್ಯಂತ ಒಟ್ಟು 17,84,398 ರೈತ ಕುಟುಂಬಗಳಿಗೆ ಜೀವನೋಪಾಯ ಪರಿಹಾರವಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 280.52 ಕೋಟಿ ರೂ ಹಾಗೂ ರಾಷ್ಟ್ರೀಯ ವಿಪತ್ತು ನಿಧಿಯಿಂದ 234.40 ಕೋಟಿ ರೂ ಸೇರಿದಂತೆ ಒಟ್ಟು 512.92 ಕೋಟಿಗಳನ್ನು ಬಿಡುಗಡೆ ಮಾಡಲು ಈಗಾಗಲೇ ಆದೇಶಿಸಲಾಗಿದೆ.
ಈ ಪರಿಹಾರದ ಮೊತ್ತವನ್ನು ಅರ್ಹ ಮಳೆಯಾಶ್ರಿತ ಒಣಭೂಮಿ ಹೊಂದಿರುವ ಸಣ್ಣ ಹಾಗೂ ಅತೀ ಸಣ್ಣ ಹಾಗೂ ಕುಟುಂಬ ಐಡಿ ಹೊಂದಿರುವ ರೈತ ಕುಟುಂಬಗಳಿಗೆ ಮಾತ್ರ ಪಾವತಿಸಲಾಗುತ್ತಿದ್ದು, ಒಂದು ಕುಟುಂಬಕ್ಕೆ ಒಂದು ಬಾರಿ ಮಾತ್ರ ಪಾವತಿ ಮಾಡಲಾಗುವುದು. ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಅರ್ಹ ರೈತರಿದ್ದಲ್ಲಿ ಪರಿಹಾರದ ಮೊತ್ತವನ್ನು PRORATA ಆಧಾರದ ಮೇಲೆ ಪ್ರತಿಯೊಬ್ಬ ಅರ್ಹ ರೈತರಿಗೆ ನಿಯಮಾನುಸಾರ ಪಾವತಿಸಲಾಗುವುದು ಮತ್ತು ಜೀವನೋಪಾಯ ಪರಿಹಾರ ಭತ್ಯೆ ಪಾವತಿ ಕುರಿತ ಎಲ್ಲಾ ಫಲಾನುಭವಿಗಳ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುವುದು.
ಇದೇ ಸಂದರ್ಭದಲ್ಲಿ ಜಿಲ್ಲೆಗೆ ಬೆಳೆ ಹಾನಿ ಪರಿಹಾರದ ಮೊತ್ತದ 11ನೇ ಕಂತಿನಲ್ಲಿ 8554 ರೈತರಿಗೆ ಒಟ್ಟು 2.20 ಕೋಟಿ ರೂ ಗಳು ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಇದುವರಗೆ ಒಟ್ಟು 1,27,801 ಫಲಾನುಭವಿಗಳಿಗೆ 38.27 ಕೋಟಿ ರೂ ಬೆಳೆ ಹಾನಿ ಪರಿಹಾರದ ಮೊತ್ತ ಬಿಡುಗಡೆಯಾಗಿದೆ.
ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!
ಜಿಲ್ಲೆಯಲ್ಲಿ ಕಳೆದ ಸಾಲಿನ ನೈಋತ್ಯ ಮುಂಗಾರಿನ ಹಂಗಾಮಿನಲ್ಲಿ, ಮಳೆ ಕೊರತೆಯಿಂದ ತಲೆದೋರಿದ ಬರದಿಂದ, ಜೀವನೋಪಾಯಕ್ಕೆ ತೀವ್ರವಾಗಿ ತೊಂದರೆಯಾಗಿರುವ ಜಿಲ್ಲೆಯ 48,487 ಅರ್ಹ ರೈತ ಕುಟುಂಬಗಳಿಗೆ ಜೀವನೋಪಾಯ ಪರಿಹಾರ ವಿತರಣೆ ಮಾಡುವ ಕುರಿತಂತೆ ಅರ್ಹ ರೈತರ ವಿವರಗಳನ್ನು ಜಿಲ್ಲಾಡಳಿತದಿಂದ ಆನ್‌ಲೈನ್ ಮೂಲಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದ್ದು, ಪ್ರಾಧಿಕಾರದಿಂದಲೇ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಮೊತ್ತ ಜಮೆ ಆಗಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.