ಕಾರವಾರ: ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ (Anganwadi Workers) ನ್ಯಾಯಯುತ ಬೇಡಿಕೆಗಳನ್ನು (Demands) ಹಂತ ಹಂತವಾಗಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಕುಂದುಕೊರತೆ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರ ಕೆಲವೊಂದು ಬೇಡಿಕೆಗಳು ಸರ್ಕಾರದ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗಿರುವುದರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗುವುದು, ಅಂಗನವಾಡಿಗಳಿಗೆ ನರೇಗಾ ಯೋಜನೆಯಡಿ ಕುಡಿಯುವ ನೀರು, ಶೌಚಾಲಯ ಮತ್ತು ಕಾಂಪೌಂಡ್ ನಿರ್ಮಿಸಲು ಅವಕಾಶವಿದ್ದು, ಮೂಲ ಸೌಕರ್ಯ ಇಲ್ಲದ ಅಂಗನವಾಡಿಗಳ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Shivamogga News: ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ದರ್ಶನ ಪಡೆದ ಲಕ್ಷಾಂತರ ಭಕ್ತರು
ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಒದಗಿಸಬೇಕು ಹಾಗೂ ಅವಧಿ ಮುಗಿದ ಪದಾರ್ಥಗಳನ್ನು ಬಳಸದಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಯಮುನಾ ಗಾಂವ್ಕರ್ ಮಾತನಾಡಿ, ಎಲ್ಲಾ ತಾಲೂಕುಗಳ ಅಂಗನವಾಡಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಮಾಹಿತಿ ನೀಡಿ, ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಇದನ್ನೂ ಓದಿ: Sirsi News: ಶಿರಸಿಯ ಪಡಂಬೈಲ್ ಮುಖ್ಯ ರಸ್ತೆಯ ಬದಿ ಕಸದ ರಾಶಿ; ಸೂಕ್ತ ಕ್ರಮಕ್ಕೆ ಒತ್ತಾಯ
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಚ್.ಎಚ್. ಕುಕನೂರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.