ಕಾರವಾರ: ಉತ್ತಮ ಮಳೆಯಿಂದಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಕೃಷಿ ಇಲಾಖೆಯಿಂದ ಪೂರೈಸುವ ಬೀಜ, ಗೊಬ್ಬರದ ಕೊರತೆ ಆಗದಂತೆ ಕ್ರಮಹಿಸಬೇಕು. ರೈತರಿಗೆ ಸರ್ಕಾರದಿಂದ ಸಿಗುತ್ತಿರುವ ಬೆಳೆ ವಿಮೆ ಹಣದಲ್ಲಿ ಇಡೀ ಜಿಲ್ಲೆಗೆ ಸಿಕ್ಕಂತ ಅರ್ಧದಷ್ಟು ವಿಮೆ ಹಣ ತಾಲೂಕಿಗೆ ದೊರೆತಿದ್ದು, ಈ ಹಣ ಸಮರ್ಪಕವಾಗಿ ರೈತರ ಖಾತೆಗೆ ತಲುಪುವಂತೆ ಎಚ್ಚರವಹಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್, ಅಧಿಕಾರಿಗಳಿಗೆ (Uttara Kannada News) ಸೂಚಿಸಿದರು.
ಮುಂಡಗೋಡ ಟೌನ್‌ಹಾಲ್‌ನಲ್ಲಿ ಮಂಗಳವಾರ ಜರುಗಿದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತೀ ತುರ್ತು ಆದಾಯ ಗಳಿಕೆಗಾಗಿ ರೈತರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಯುಕ್ತ ಬೀಜ, ಗೊಬ್ಬರ ಬಿತ್ತನೆಗೆ ಮುಂದಾಗುತ್ತಿದ್ದು, ಭವಿಷ್ಯದಲ್ಲಿ ಭೂಮಿಯ ಸಂಪೂರ್ಣ ಫಲವತ್ತತೆ ಕ್ಷೀಣಿಸಿ ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಜತೆಗೆ ಮುಂಬರುವ ದಿನಗಳಲ್ಲಿ ಭೂಮಿಯ ಫಲವತ್ತತೆಯು ಹಾಳಾಗಲಿದೆ. ಹೀಗಾಗಿ ಭವಿಷ್ಯದ ಹಿತದೃಷ್ಟಿಯಿಂದ ತಾಲೂಕಿನ ಪ್ರತಿಯೊಬ್ಬ ರೈತರು ಸಾವಯುವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಪ್ರತಿಯೊಬ್ಬ ಜನಸಾಮಾನ್ಯನಿಗೂ ಸರ್ಕಾರಿ ಸೌಲಭ್ಯಗಳು ದೊರಕುವಂತೆ ಜಾಗೃತಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: Karnataka Weather : ಗುಡುಗು, ಸಿಡಿಲಿನ ಮಳೆಗೆ ಮನೆಯ ಗೋಡೆ ಕುಸಿತ; ನಾಳೆಗೂ ಇದೆ ಅಲರ್ಟ್
ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕೆ ಕ್ಷೇತ್ರ ವಿಸ್ತರಿಸಲು ಶಾಸಕರು ಸೂಚಿಸಿದರು.
ಇದಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉತ್ತರಿಸಿ, ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಕ್ಷೇತ್ರ 400 ರಿಂದ 500 ಹೆಕ್ಟರ್ ಪ್ರದೇಶ ಹೆಚ್ಚಾಗಿದೆ. 2022-23ರಲ್ಲಿ ನರೇಗಾದಡಿ ಅಂದಾಜು 70 ಸಾವಿರ ಮಾನವ ದಿನ ಸೃಜನೆ ಗುರಿ ನಿಗದಿಪಡಿಸಲಾಗಿತ್ತು. ಇದಕ್ಕೆ ವಿರುದ್ಧವಾಗಿ 90 ಸಾವಿರ ಮಾನವ ದಿನ ಸೃಜಿಸುವ ಮೂಲಕ ನಿಗದಿತ ಗುರಿಗಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 1 ಲಕ್ಷಕ್ಕೂ ಅಧಿಕ ಮಾನವ ದಿನಗಳ ಗುರಿ ನೀಡಿದ್ದು, ಈಗಾಗಲೇ 15 ಸಾವಿರದಷ್ಟು ಮಾನವ ದಿನ ಸೃಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕಿನ ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಅನುದಾನದ ಜತೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಲಭ್ಯವಿರುವ ಕಾಮಗಾರಿಗಳನ್ನು ಕೈಗೊಂಡು ನರೇಗಾದ ಸಂಪೂರ್ಣ ಲಾಭ ಪಡೆಯುವುದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
ಇದನ್ನೂ ಓದಿ: Migraine Problem: ಮೈಗ್ರೇನ್ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!
ಪ್ರಸಕ್ತ ವರ್ಷದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಯ ಪ್ರಕರಣಗಳು ಕಂಡು ಬರದಂತೆ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ವೈದ್ಯರು ಸಣ್ಣಪುಟ್ಟ ವಿಷಯಗಳಿಗೂ ತಾಲೂಕಿನ ಬಡ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸುತ್ತಿರುವುದು ಬೇಸರದ ಸಂಗತಿ. ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಸಭೆಗೂ ಪೂರ್ವದಲ್ಲಿ ಶಾಸಕರು ಅಭಿವೃದ್ಧಿ ಆಕಾಂಕ್ಷಿ ತಾಲೂಕಾ ಕಾರ್ಯಕ್ರಮದ ಫೋಸ್ಟರ್ ಬಿಡುಗಡೆ ಮಾಡಿದರು. ಎನ್‌ಆರ್‌ಎಲ್‌ಎಂ ಯೋಜನೆಯಡಿ ಸ್ವಸಹಾಯ ಸಂಘಗಳ ಸದಸ್ಯರು ಅತಿಥಿ ಗಣ್ಯರಿಗೆ ಗೌರವಪೂರ್ವಕವಾಗಿ ನೀಡಲು ತಯಾರಿಸಿದ ವಿವಿಧ ಆದಾಯೋತ್ಪನ್ನಗಳನ್ನು ಒಳಗೊಂಡ ಉಡುಗೊರೆ ಬುಟ್ಟಿ ಸ್ವೀಕರಿಸಿ ಪ್ರಶಂಸೆ ವ್ಯಕ್ತಪಡಿಸಿದರು.
2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90 ರಷ್ಟು ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಿದರು.
ಇದನ್ನೂ ಓದಿ: Gemini Mobile App: ಕನ್ನಡ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಗೂಗಲ್ ಜೆಮಿನಿ ಆ್ಯಪ್; ಏನಿದರ ಉಪಯೋಗ?
ಸಭೆಯಲ್ಲಿ ತಹಸೀಲ್ದಾರ್ ಶಂಕರಗೌಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ, ಸಿಪಿಐ ರಂಗನಾಥ ನೀಲಮ್ಮನವರ, ಎಸಿಎಫ್ ರವಿ ಹುಲಕೋಟಿ, ಪ.ಪಂ ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ನರೇಗಾ ಸಹಾಯ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಐಇಸಿ, ಎಂಐಎಸ್ ಸಂಯೋಜಕರು, ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಇತರರಿದ್ದರು.