ಕಾರವಾರ: ಹವಾಮಾನ ವೈಪರೀತ್ಯದಿಂದ ಕಾರವಾರದ ಬಂದರು ಪ್ರದೇಶದಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟೊಂದು (Fishing Boat) ಲಂಗರು ತುಂಡಾಗಿ ರವೀಂದ್ರನಾಥ ಟ್ಯಾಗೋರ್ ಕಡಲ ತೀರಕ್ಕೆ ಬಂದು ಅಪ್ಪಳಿಸಿದೆ.
ನಗರದ ವಾಣಿಜ್ಯ ಬಂದರು ವ್ಯಾಪ್ತಿಯಲ್ಲಿ ಲಂಗರು ಹಾಕಿದ್ದ ಮಂಗಳೂರು ಮೂಲದ ಮಿಸ್ಬಾ ಹೆಸರಿನ ಮೀನುಗಾರಿಕಾ ಬೋಟು ತಡರಾತ್ರಿ ಅವಘಡಕ್ಕೆ ಸಂಭವಿಸಿ ದಡಕ್ಕೆ ಬಂದಿದ್ದು ಬೋಟಿನಲ್ಲಿ ಮೀನುಗಾರರು ಇದ್ದರಾದರೂ ಅದೃಷ್ಟವಶಾತ್ ಹೆಚ್ಚಿನ ಅವಘಡ ಸಂಭವಿಸಿಲ್ಲ. ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನಲೆ ದಡಕ್ಕಪ್ಪಳಿಸಿರುವ ಬೋಟಿನ ರಕ್ಷಣಾ ಕಾರ್ಯ ವಿಳಂಬವಾಗುವಂತಾಗಿದೆ.
ಉತ್ತರ ಕನ್ನಡ ಕರಾವಳಿಯಲ್ಲಿ ಕಳೆದೊಂದು ವಾರದಿಂದ ಮಳೆಯಬ್ಬರ ಹೆಚ್ಚಾಗಿದ್ದು, ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಆಳಸಮುದ್ರದಲ್ಲಿ ಭಾರೀ ಪ್ರಮಾಣದ ಮಳೆಯೊಂದಿಗೆ ವೇಗವಾಗಿ ಗಾಳಿ ಬೀಸುತ್ತಿದೆ. ಹೀಗಾಗಿ ರಾಜ್ಯದ ಕರಾವಳಿಯಲ್ಲೇ ಸುರಕ್ಷಿತ ಬಂದರಾಗಿರುವ ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ ಬಂದರು ಪ್ರದೇಶದಲ್ಲಿ ಹೊರಜಿಲ್ಲೆ, ಹೊರರಾಜ್ಯಗಳಿಂದ ಆಗಮಿಸಿರುವ ಮೀನುಗಾರಿಕಾ ಬೋಟುಗಳು ಲಂಗರು ಹಾಕಿ ನಿಂತಿವೆ. ಮಲ್ಪೆ, ಮಂಗಳೂರು, ಕೇರಳ, ಗೋವಾ ಸೇರಿದಂತೆ ವಿವಿಧೆಡೆಗಳಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ 250ಕ್ಕೂ ಅಧಿಕ ಮೀನುಗಾರಿಕಾ ಬೋಟುಗಳು ಕಾರವಾರ ಬಂದರು ವ್ಯಾಪ್ತಿಯಲ್ಲಿ ಆಶ್ರಯ ಪಡೆದುಕೊಂಡಿವೆ.
ಇದನ್ನೂ ಓದಿ: Heart Attack: ಪರೀಕ್ಷೆ ಬರೆಯುವಾಗ ಹೃದಯಾಘಾತವಾಗಿ ವಿದ್ಯಾರ್ಥಿ ಸಾವು
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ಭಾರೀ ಪ್ರಮಾಣದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು ಈ ವೇಳೆ ಮೀನುಗಾರಿಕೆ ನಡೆಸಿದಲ್ಲಿ ಬಲೆಗಳಿಗೆ ಹಾನಿಯಾಗುವುದರ ಜತೆಗೆ ಬೋಟುಗಳೂ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಹವಾಮಾನ ವೈಪರೀತ್ಯದ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಶುಕ್ರವಾರದಿಂದ ಕಾರವಾರ ಬಂದರಿನಲ್ಲಿ ಮೀನುಗಾರಿಕಾ ಬೋಟುಗಳು ಲಂಗರು ಹಾಕಿ ರಕ್ಷಣೆ ಪಡೆದುಕೊಂಡಿವೆ.. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದ್ದು, ಮೀನುಗಾರಿಕೆಗೆ ತೆರಳದಂತೆ ಮೀನುಗಾರಿಕಾ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಅಕ್ಟೋಬರ್ 2ರ ಬಳಿಕ ಬೋಟುಗಳು ಮೀನುಗಾರಿಕೆಗೆ ತೆರಳಬಹುದಾಗಿದೆ.
ಕಳೆದ ಬಾರಿ ಮಳೆಯ ಕಾರಣದಿಂದ ಮೀನುಗಾರಿಕೆ ನಡೆಸಲಾಗದೇ ಮೀನುಗಾರರು ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ಉತ್ತಮ ಮೀನುಗಾರಿಕೆ ನಡೆದರೂ ಸಹ ಮೀನುಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲವಾಗಿದ್ದು ಇದೀಗ ಮೀನುಗಾರಿಕೆ ಸ್ಥಗಿತಗೊಳ್ಳುವಂತಾಗಿದೆ. ಕಳೆದ ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ಸ್ಥಗಿತಗೊಂಡ ಪರಿಣಾಮ ಮೀನುಗಾರರು ಸಾಕಷ್ಟು ನಷ್ಟ ಅನುಭವಿಸುವಂತಾಗಿದ್ದು ಸರ್ಕಾರದಿಂದಲೂ ಯಾವುದೇ ನೆರವು ಸಿಗುತ್ತಿಲ್ಲ ಎಂದು ಮಲ್ಪೆಯ ಆಳಸಮುದ್ರ ಮೀನುಗಾರಿಕಾ ಬೋಟಿನ ಕಾರ್ಮಿಕ ಬಾಲಕೃಷ್ಣ ಮೊಗೇರ್ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: New York Flood: ಶತಮಾನದ ಮಳೆಗೆ ತತ್ತರಿಸಿದ ನ್ಯೂಯಾರ್ಕ್; ಕೆರೆಯಂತಾಗಿವೆ ಊರುಗಳು!
ಒಂದು ವಾರ ಮೀನುಗಾರಿಕೆ ನಡೆಸುವ ಉದ್ದೇಶದಿಂದ ಬೋಟಿಗೆ ಸಾವಿರಾರು ರೂಪಾಯಿ ಡೀಸೆಲ್ ತುಂಬಿಕೊಂಡು ಆಗಮಿಸಿದ್ದು, ನಾಲ್ಕೈದು ದಿನ ಮೀನುಗಾರಿಕೆ ನಡೆಸುವಾಗಲೇ ವಾಯುಭಾರ ಕುಸಿತದಿಂದ ಬಂದರಿಗೆ ವಾಪಸ್ಸಾಗುವಂತಾಗಿದೆ. ಬೋಟಿನಲ್ಲಿದ್ದ ರೇಷನ್ ಇನ್ನೆರಡು ದಿನಕ್ಕೆ ಮಾತ್ರ ಸಾಕಾಗುವಂತಿದ್ದು ಹವಾಮಾನ ವೈಪರೀತ್ಯ ಕಡಿಮೆಯಾಗಿ ಮೀನುಗಾರಿಕೆಗೆ ಅವಕಾಶ ಸಿಕ್ಕರೂ ಮೀನುಗಾರಿಕೆ ನಡೆಸಲಾಗದ ಸ್ಥಿತಿಯಿದೆ ಅಂತಾರೆ ಆಳಸಮುದ್ರ ಮೀನುಗಾರಿಕಾ ಬೋಟಿನ ಮೀನುಗಾರ ಗೋಕುಲ್.