Site icon Vistara News

Uttara Kannada News: ಯಲ್ಲಾಪುರ ಪ.ಪಂ ಸಾಮಾನ್ಯ ಸಭೆ; 92.25 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ

Approval for drinking water project for Yallapur town

ಯಲ್ಲಾಪುರ: ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ ಬೊಮ್ಮನಹಳ್ಳಿ ಪಿಕಪ್‌ ಜಲಾಶಯದಿಂದ ನೀರು ಸರಬರಾಜು (Water Supply) ಮಾಡಲು 92.25 ಕೋಟಿ ವೆಚ್ಚದ ಯೋಜನೆಯ ಠರಾವಿಗೆ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು ಅನುಮೋದನೆ (Uttara Kannada News) ನೀಡಿದರು.

ಪಟ್ಟಣದ ಪ.ಪಂ. ಸಭಾಭವನದಲ್ಲಿ ಬುಧವಾರ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್‌ ಗುರುರಾಜ ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಸದಸ್ಯರು, ಅನುಷ್ಠಾನ ಮಾಡುವುದರ ಕುರಿತು ಹಾಗೂ ಕಾಲಾನಂತರ ಅದರ ನಿರ್ವಹಣೆಯ ಕುರಿತು ದೀರ್ಘಕಾಲ ಚರ್ಚಿಸಿ, ಪಟ್ಟಣಕ್ಕೆ ನೀರಿನ ಕೊರತೆಯನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಒಲವು ತೋರಿ, ಪ್ಯಾಕೇಜ್‌ ಟೆಂಡರ್‌ ಆಧಾರದ ಮೇಲೆ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಠರಾವಿಗೆ ಸಮ್ಮತಿ ಸೂಚಿಸಿದರು.

ಇನ್ನುಳಿದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ.128 ರಲ್ಲಿ ನಾಮಧಾರಿ, ಗ್ರಾಮ ಒಕ್ಕಲಿಗ, ದೈವಜ್ಞ ಬ್ರಾಹ್ಮಣ, ತಾಲೂಕಾ ಬೋವಿವಡ್ಡರ ಮತ್ತು ಬಂಜಾರ ಸಮಾಜಗಳ ಸಮುದಾಯ ಭವನ ನಿರ್ಮಾಣಕ್ಕೆ ತಲಾ 5 ಗುಂಟೆ ಜಾಗ ಮಂಜೂರು ಮಾಡುವಂತೆ ತಹಸೀಲ್ದಾರರಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು. ಪಟ್ಟಣ ವ್ಯಾಪ್ತಿಯಲ್ಲಿರುವ 5 ಸಾರ್ವಜನಿಕ ಶೌಚಾಲಯಗಳನ್ನು ಲೀಸ್ ಆಧಾರದ ಮೇಲೆ ನಿರ್ವಹಣೆಗೆ ನೀಡಲು ಒಪ್ಪಿ, ಶೌಚಾಲಯ ಬಳಕೆಗೆ ಕನಿಷ್ಠ ಹಣ ನಿಗದಿಪಡಿಸಲಾಯಿತು.

ಇದನ್ನೂ ಓದಿ: Stock Market: 612 ಅಂಕ ಜಿಗಿದ ಸೆನ್ಸೆಕ್ಸ್, ಹೂಡಿಕೆದಾರರು ಫುಲ್ ಖುಷ್

ಈ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಕುರಿತು ಚರ್ಚಿಸಿ, ಉಪನೋಂದಣಾಧಿಕಾರಿಗಳ ಪರಿಷ್ಕೃತ ಮೌಲ್ಯಮಾಪನದ ಆಧಾರದ ಮೇಲೆ ತೆರಿಗೆ ಹೆಚ್ಚಳದ ನಿರ್ಣಯ ಕೈಗೊಳ್ಳಲಾಯಿತು. ಅಂತೆಯೇ ಸರ್ಕಾರದ ಆದೇಶದನ್ವಯ ಆಸ್ತಿ ತೆರಿಗೆ ವಿನಾಯಿತಿ ಹೊಂದಿರುವ ಕಟ್ಟಡಗಳಿಂದ ಆಸ್ತಿ ತೆರಿಗೆಯ ಶೇ.25 ರಷ್ಟನ್ನು ಸೇವಾ ಶುಲ್ಕ ವಸೂಲಿ ಮಾಡಲು ತೀರ್ಮಾನಿಸಲಾಯಿತು. 2023-24 ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಮನೆ ನಿರ್ಮಾಣ ಅಥವಾ ದುರಸ್ತಿ ಸಹಾಯಧನಕ್ಕೆ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ 7 ಸಾಮಾನ್ಯ, ಪ.ಜಾ. 5, ಪ.ಪಂ. 2 ಫಲಾನುಭವಿಗಳಿಗೆ ಮಂಜೂರಿ ನೀಡಲಾಯಿತು.

ನಂತರ ಮಾತನಾಡಿದ ತಹಸೀಲ್ದಾರ್‌ ಗುರುರಾಜ ಎಂ., ಸದಸ್ಯರು ಯಾವುದೇ ವಿಷಯದ ಕುರಿತು ಮಾಹಿತಿ ಬೇಕಿದ್ದಲ್ಲಿ ಅಥವಾ ದೂರು ಇದ್ದಲ್ಲಿ ಲಿಖಿತವಾಗಿ ಮನವಿ ನೀಡಿ, ಸಭೆಯಲ್ಲಿ ಆ ಕುರಿತು ಚರ್ಚಿಸಬಹುದು. ಆ ಮೂಲಕ ಚರ್ಚಿಸಲ್ಪಟ್ಟ ಪ್ರತಿ ವಿಷಯದ ಕುರಿತು ದಾಖಲೆ ಉಳಿಯುತ್ತದೆ.

ಪಟ್ಟಣದಲ್ಲಿ 3 ವರ್ಷಗಳಿಂದ ಖಾಲಿ ಉಳಿದಿರುವ ನಿವೇಶನಗಳನ್ನು ತಹಸೀಲ್ದಾರರು ತಮ್ಮ ವ್ಯಾಪ್ತಿಗೆ ತೆಗೆದುಕೊಳ್ಳುವ ಅಧಿಕಾರವಿದೆ. ಕರ ವಸೂಲಾತಿಗೆ ಜನಪ್ರತಿನಿಧಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಪಟ್ಟಣದಲ್ಲಿ ಹೆಚ್ಚಿನ ಮೊತ್ತದಲ್ಲಿ ತೆರಿಗೆ ಪಾವತಿ ಬಾಕಿ ಉಳಿಸಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಇದನ್ನೂ ಓದಿ: Business Guide : ಎಷ್ಟೋ ಸಲ ಸಿಂಪಲ್ಲಾಗಿ ಮಾತನಾಡುವುದೇ ಅತಿ ದೊಡ್ಡ ಸಾಹಸ

ಈ ಸಂದರ್ಭದಲ್ಲಿ ಪ.ಪಂ. ಮುಖ್ಯಾಧಿಕಾರಿ ಸುನಿಲ್‌ ಗಾವಡೆ, ಪಟ್ಟಣ ಪಂಚಾಯತ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version