ಕಾರವಾರ: ಗಾಂಜಾ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ (Court) ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು (Accused) ಕಾರವಾರ ನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ.
ಕಾರವಾರದ ಸದಾಶಿವಗಡ ನಿವಾಸಿ ಪ್ರಶಾಂತ ಸದಾಶಿವ ನಾಯರ್ ಬಂಧಿತ ಆರೋಪಿ. ಈತನ ಮೇಲೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ 2013ರಲ್ಲಿ ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ ಬಂಧನದ ವಾರೆಂಟ್ ಕೂಡ ಜಾರಿಯಾಗಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗದೇ, ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡಿಕೊಂಡಿದ್ದ ಆರೋಪಿಯನ್ನು ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸದಾಶಿವಗಡದ ರಾಜಕೇನಿಭಾಗದಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರವಾರ ಉಪವಿಭಾಗದ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ರವರ ನಿರ್ದೇಶನದಂತೆ, ಕಾರವಾರ ನಗರ ಠಾಣೆ ಪೊಲೀಸ್ ನಿರೀಕ್ಷಕ ರಮೇಶ್ ಹೂಗಾರ್ ರವರ ಮಾರ್ಗದರ್ಶನದಲ್ಲಿ, ಪಿಎಸ್ಐ ವಿಶ್ವನಾಥ ನಿಂಗೊಳ್ಳಿ ನೇತೃತ್ವದ ತಂಡದಲ್ಲಿ ಸಿಬ್ಬಂದಿಗಳಾದ ಸೂರಜ್ ಕೊಠಾರಕರ್, ರಾಜೇಶ್ ನಾಯಕ್, ಗಿರೀಶಯ್ಯ, ವಿಕಾಸ್ ನಾಂದ್ರೆ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.