Site icon Vistara News

Uttara Kannada News: ಪಾಕ್‌ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಲ್ಲಾಪುರದಲ್ಲಿ ಬಿಜೆಪಿ ಪ್ರತಿಭಟನೆ

BJP protest demanding action against those who shouted pro Pak slogan

ಯಲ್ಲಾಪುರ: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿರುವ ದೇಶದ್ರೋಹಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ, ಬಿಜೆಪಿ ಯಲ್ಲಾಪುರ ಮಂಡಳ ವತಿಯಿಂದ ಪಟ್ಟಣದ ತಾಲೂಕಾ ಆಡಳಿತ ಸೌಧದ ಎದುರು (Uttara Kannada News) ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಮಾತನಾಡಿ, ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚನೆ ಆದಾಗಿನಿಂದ ರಾಜ್ಯದ ವಿವಿಧೆಡೆ ಪಾಕಿಸ್ತಾನದ ಧ್ವಜ ಹಾರಾಡುವುದನ್ನು ನಾವು ಕಂಡಿದ್ದೇವೆ. ಅಂದಿನಿಂದ ಆರಂಭವಾಗಿ ಇಂದು ನಮ್ಮ ರಾಜ್ಯದ ಶಕ್ತಿ ಕೇಂದ್ರದಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗುವಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ. ದೇಶದ ಪ್ರತ್ಯೇಕತಾವಾದಿ ಶಕ್ತಿಗಳನ್ನು ಪೋಷಿಸುವ ಕಾರ್ಯ ಇಂದಿನ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ನಾಸಿರ್ ಹುಸೇನ್‌ ಅವರ ವಿಜಯವನ್ನು ಅವರ ಬೆಂಬಲಿಗರು ಭಾರತ – ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಪಾಕಿಸ್ತಾನ ಗೆದ್ದಂತೆ ಸಂಭ್ರಮಿಸುವುದು ವಿಷಾದನೀಯ. ಇದನ್ನು ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧವೇ ಕಾಂಗ್ರೆಸ್ ಸರ್ಕಾರ ಇಂದು ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಹಿಂದೆಯೂ ಸಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಧ್ಯಮದ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತ್ತು. ಸ್ವಾತಂತ್ರ್ಯದ 75 ವರ್ಷಗಳ ಬಳಿಕವೂ ಮಾಧ್ಯಮಕ್ಕೆ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ಉಂಟಾಗಿದೆ. ಇವೆಲ್ಲವನ್ನೂ ವಿರೋಧ ಪಕ್ಷವಾಗಿ ಬಿಜೆಪಿ ಕಟುವಾಗಿ ಖಂಡಿಸುತ್ತದೆ. ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದರು.

ಇದನ್ನೂ ಓದಿ: Karnataka Weather : ಬಿಸಿಲ ತಾಪಕ್ಕೆ ಕರಾವಳಿ, ಉತ್ತರ ಕರ್ನಾಟಕ ತತ್ತರ

ಇತ್ತೀಚಿನ ಬಜೆಟ್‌ನಲ್ಲಿಯೂ ಸಹ ಯಾವ ರೀತಿಯಲ್ಲಿ ಒಂದು ಸಮುದಾಯದ ಪುಷ್ಟೀಕರಣಕ್ಕೆ ಮುಂದಾಗಿರುವುದನ್ನು ನಾವೆಲ್ಲ ನೋಡಿದ್ದೇವೆ. ಅಲ್ಪಸಂಖ್ಯಾತರಿಗೋಸ್ಕರವೇ ನಮ್ಮ ಸರ್ಕಾರ ಎಂದು ಹೇಳಿಕೊಳ್ಳುವ ಅವರು, ದೇಶವನ್ನು ತುಂಡರಿಸುವ ಕೈಗಳಿಗೋಸ್ಕರ ಸರ್ಕಾರ ನಡೆಸುತ್ತಿರುವುದು ವಿಷಾದನೀಯ. ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರಾಗಿ ಇಬ್ಭಾಗ ಮಾಡುವ ದುರುದ್ದೇಶ ಹೊಂದಿದೆ. ಇಂತಹ ಕಾಂಗ್ರೆಸ್ ಸರ್ಕಾರ ದೇಶದಿಂದ ನಾಶವಾಗಬೇಕು. ಇದಕ್ಕೆ 2014 ರಿಂದಲೇ ದೇಶದ ಜನರು ಮುನ್ನುಡಿ ಹಾಕಿದ್ದು, ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮುಕ್ತ ಭಾರತದ ರಚನೆಗೆ ದೇಶದ ಜನರು ಕೈಜೋಡಿಸಲಿದ್ದಾರೆ ಎನ್ನುವ ಭರವಸೆ ಇದೆ ಎಂದರು.

ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ರಾಜೆಂದ್ರ ನಾಯ್ಕ ಮಾತನಾಡಿ, ಘಟನೆಯ ಕುರಿತು ಪರಿಶೀಲನೆ ನಡೆಸುವುದಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ ಹೊರತು, ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಲೇಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Summer Shopping 2024: ಮಾಲ್‌ಗಳಲ್ಲಿ ಸಮ್ಮರ್‌ಗೂ ಮುನ್ನವೇ ಶುರುವಾಯ್ತು ಸೀಸನ್‌ ಶಾಪಿಂಗ್‌

ಹಿರಿಯ ಮುಖಂಡ ಪ್ರಮೋದ್ ಹೆಗಡೆ ಮಾತನಾಡಿ, ನಮ್ಮ ಸುಸಂಸ್ಕೃತ ದೇಶಕ್ಕೆ ಪ್ರತಿನಿತ್ಯ ಅಶಾಂತಿಯನ್ನು ಉಂಟು ಮಾಡುತ್ತಿರುವ ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ಖಂಡನಾರ್ಹ ಎಂದು ತಿಳಿಸಿದರು.

ಪ್ರತಿಭಟನಾಕಾರರು ತಹಸೀಲ್ದಾರ್‌ ಎಂ .ಗುರುರಾಜ್ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ: Job Alert: ದ್ವಿತೀಯ ಪಿಯುಸಿ ಪಾಸ್‌ ಆದವರಿಗೆ ಗುಡ್‌ನ್ಯೂಸ್‌; 2,500 ಬಿಎಂಟಿಸಿ ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ

ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ್, ನಿಕಟಪೂರ್ವ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಮುಖರಾದ ರಾಮು ನಾಯ್ಕ, ಪ.ಪಂ. ಸದಸ್ಯ ಸೋಮೇಶ್ವರ ನಾಯ್ಕ, ಮಹಿಳಾ ಮೋರ್ಚಾ ಸದಸ್ಯೆ ರೇಖಾ ಹೆಗಡೆ, ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version