Site icon Vistara News

Uttara Kannada News: ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿ: ಸಚಿವ ಮಂಕಾಳ ವೈದ್ಯ

Blacklist contractors who do not complete work within time says Minister Mankala Vaidya

ಕಾರವಾರ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರು ಮತ್ತು ಗುತ್ತಿಗೆ ಕಂಪನಿಗಳು ನಿಗಧಿ ಅವಧಿಯೊಳಗೆ ಕಾಮಗಾರಿಗಳನ್ನು ಮುಕ್ತಾಯಗೊಳಿಸದೇ ಇದ್ದಲ್ಲಿ ಅಂತಹವರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಎಲ್ಲಾ ಅಧಿಕಾರಿಗಳಿಗೆ (Uttara Kannada News) ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 450 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯು ನಿಗಧಿತ ಒಪ್ಪಂದದಂತೆ ಮುಕ್ತಾಯಗೊಂಡು ಮಾರ್ಚ್ ತಿಂಗಳಲ್ಲಿ ಕಟ್ಟಡ ಹಸ್ತಾಂತರವಾಗಬೇಕಿತ್ತು. ಆದರೆ ಇಲ್ಲಿಯವರೆಗೆ ಹಸ್ತಾಂತರವಾಗದ ಹಿನ್ನಲೆಯಲ್ಲಿ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಯೋಜನೆಯ ಪ್ರಯೋಜನ ದೊರೆಯದೇ ಚಿಕಿತ್ಸೆಗೆ ಪರದಾಡುವಂತಾಗಿದೆ.

ಅಲ್ಲದೇ ಜಿಲ್ಲೆಯಲ್ಲಿ ಕೈಗೊಂಡಿರುವ ಹಲವು ಅಭಿವೃದ್ದಿ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡಿರುವ ಇತರೆ ಗುತ್ತಿಗೆದಾರರು ಮತ್ತು ಗುತ್ತಿಗೆ ಕಂಪನಿಗಳು ನಿಗಧಿತ ಅವಧಿಯೊಳಗೆ ಕಾಮಗಾರಿಗಳನ್ನು ಮುಕ್ತಾಯಗೊಳಿದೇ ಇದ್ದಲ್ಲಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಟೆಂಡರ್ ಅವಧಿಯನ್ನು ವಿಸ್ತರಣೆ, ನವೀಕರಣ ಸೇರಿದಂತೆ ಬಿಲ್ಲು ಪಾವತಿಯನ್ನೂ ಸಹ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದನ್ನೂ ಓದಿ: DK Shivakumar: ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ.ಶಿ

ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ಸರ್ಕಾರಿ ಕೋಟದಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದ 61 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅದರಲ್ಲಿ 24 ವೈದ್ಯರು ಹೇಳದೇ ಕೇಳದೇ ಕೆಲಸ ಬಿಟ್ಟು ಹೋಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವ ವಿದ್ಯಾರ್ಥಿಗೆ ಸರ್ಕಾರವು ಸುಮಾರು 2 ಕೋಟಿ ರೂ ಅಧಿಕ ಮೊತ್ತವನ್ನು ವೆಚ್ಚ ಮಾಡುತ್ತಿದ್ದು, ವೈದ್ಯಕೀಯ ಪದವಿ ಪಡೆದ ಇಂತಹ ವೈದ್ಯರು ಕಡ್ಡಾಯ ಸರ್ಕಾರಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದ್ದು, ಅದರಂತೆ ಕೆಲಸಕ್ಕೆ ಸೇರಿ, ಉತ್ತಮ ವೇತನ ನೀಡಿದರೂ ಕೂಡಾ ಯಾವುದೇ ಸೂಕ್ತ ಕಾರಣ ನೀಡದೇ ಕೆಲಸ ಬಿಟ್ಟು ಹೋಗಿರುವ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವರು, ಅಂತಹ ವೈದ್ಯರ ವಿರುದ್ದ ಕಾನೂನು ಸಲಹೆ ಪಡೆದು ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ವೈದ್ಯರು ಮತ್ತು ಸಿಬ್ಬಂದಿಗಳು ಗೌರವದಿಂದ ಕಾಣುವುದರ ಜತೆಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಹಾಗೂ ಆಸ್ಪತ್ರೆಗೆ ಬರುವವರು ಬಡಜನತೆಯಾಗಿದ್ದು, ಅವರಿಗೆ ಚೀಟಿ ನೀಡಿ ಹೊರಗಡೆಯಿಂದ ಔಷಧ ಪಡೆಯಲು ತಿಳಿಸುವ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಹಾಗೂ ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲದಿದ್ದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಮೂಲಕ ಖರೀದಿಸಿ, ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಔಷಧಗಳನ್ನು ಉಚಿತವಾಗಿ ನೀಡಬೇಕು ಎಂದು ಸೂಚಿಸಿದ ಸಚಿವರು, ಜಿಲ್ಲಾ ಆಸ್ಪತ್ರೆಗೆ ಬೇಕಾದ ಎಂ.ಆರ್.ಐ ಯಂತ್ರವನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಒಟ್ಟು 112 ಮಂಗನಕಾಯಿಲೆ ಪ್ರಕರಣಗಳು ವರದಿಯಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ ಎಂಬ ಆರೋಗ್ಯ ಇಲಾಖೆಯ ಮಾಹಿತಿಯ ಕುರಿತಂತೆ, ಮಂಗನ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಾಡು ಪ್ರಾಣಿಯಿಂದ ಮರಣ ಹೊಂದಿದವರಿಗೆ ಅರಣ್ಯ ಕಾಯ್ದೆಯಡಿಯಲ್ಲಿ 15 ಲಕ್ಷ ಪರಿಹಾರ ನೀಡಲು ಅವಕಾಶವಿರುವುದರಿಂದ, ಮಂಗನ ಕಾಯಿಲೆಯಿಂದ ಮರಣ ಹೊಂದಿದವರನ್ನು ಮತ್ತು ಹಾವು ಕಡಿತದಿಂದ ಮರಣ ಹೊಂದಿದವರಿಗೆ ಈ ಕಾಯಿದೆಯಡಿಯಲ್ಲಿಯೇ ಪರಿಹಾರ ಒದಗಿಸುವ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: Lakshmi Hebbalkar: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ‌ ಆದೇಶ ರದ್ದು? ಲಕ್ಷ್ಮೀ ಹೆಬ್ಬಾಳಕರ್ ಸುಳಿವು

ಜಿಲ್ಲೆಯಲ್ಲಿನ ಸರ್ಕಾರಿ ಜಾಗಗಳು ಯಾವುದೇ ಕಾರಣಕ್ಕೂ ಅತಿಕ್ರಮಣವಾಗದಂತೆ ಜಾಗದ ಸರ್ವೇ ಮಾಡಿಸಿ, ಅದಕ್ಕೆ ಕಂಪೌಂಡ್ ಹಾಕಬೇಕು. ಸರ್ಕಾರಿ ಜಾಗ ಅತಿಕ್ರಮಣವಾದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಬೇಕಾದ ಎಲ್ಲಾ ಅಗತ್ಯ ಸಹಕಾರ ನೀಡಲಿದ್ದು, ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮವಹಿಸಬೇಕು. ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತಿರ್ಣವಾದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳಲು ಆದ ಸಮಸ್ಯೆ ಏನು ಎಂಬುದರ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಉತ್ತಮ ಮಾರ್ಗದರ್ಶನ ನೀಡಿ 100% ಉತ್ತೀರ್ಣರಾಗಲು ಶ್ರಮವಹಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವರು, ಕಾಮಗಾರಿ ಆರಂಭಗೊಂಡು 9 ವರ್ಷಗಳು ಕಳೆದರೂ ಇನ್ನೂ ಮುಕ್ತಾಯಗೊಂಡಿಲ್ಲ, ಟೋಲ್ ಮಾತ್ರ ವಸೂಲಿ ಮಾಡುತ್ತಿದ್ದೀರಿ, ಪ್ರತೀ ಸಭೆಯಲ್ಲೂ ಕಾಮಗಾರಿಯ ಪ್ರಗತಿಯ ಬಗ್ಗೆ ಸೂಕ್ತ ಉತ್ತರ ದೊರೆಯುವುದಿಲ್ಲ. ಕಾಮಗಾರಿ ಮುಕ್ತಾಯಗೊಳಿಸದೇ ಶೇಖರಣೆ ಮಾಡಿಟ್ಟುಕೊಂಡಿರುವ ಜಲ್ಲಿ, ಮರಳು ಮತ್ತು ಕಲ್ಲುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು 6 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ಸಭೆಗೆ ತಿಳಿಸಿದರು.

ಮೀನುಗಾರರಿಗೆ ಸಂಕಷ್ಟ ಪರಿಹಾರ ಭತ್ಯೆಯನ್ನು 24 ಗಂಟೆಯೊಳಗೆ ನೀಡುವಂತೆ ಸೂಚನೆ ನೀಡಿದ ಸಚಿವರು, ಮೀನುಗಾರರಿಗೆ ಲಭ್ಯವಿರುವ ಯೋಜನೆಗಳ ಬಗ್ಗೆ ಮೀನುಗಾರರ ಸಂಘಗಳಿಗೆ ವಿವರವಾದ ಮಾಹಿತಿಯನ್ನು ನೀಡುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಮೀನುಗಾರರ ಮಹಿಳೆಯರಿಗೆ ಹಾಗೂ ಮೀನುಗಾರಿಕೆ ಉದ್ದೇಶಕ್ಕೆ ನೀಡುವ ಸಾಲವನ್ನು ಅನಗತ್ಯ ಕಾರಣಗಳಿಂದ ತಿರಸ್ಕರಿಸದೇ ಸಕಾಲದಲ್ಲಿ ಸಾಲವನ್ನು ವಿತರಿಸಲು ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡುವಂತೆ ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಸೂಚಿಸಿದರು.

ಜಿಲ್ಲೆಯಲ್ಲಿ ಮಂಜೂರಾದ ಅಂಗನವಾಡಿಗಳು ಮುಂದಿನ 6 ತಿಂಗಳ ಒಳಗೆ ಸ್ವಂತ ನಿವೇಶನ ಹಾಗೂ 1 ವರ್ಷದೊಳಗೆ ಸ್ವಂತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವಂತೆ ಮತ್ತು ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಕುಡಿಯುವ ನೀರಿನ ಯೋಜನೆಗಳಿಗಾಗಿ ರಸ್ತೆಗಳನ್ನು ಹಾಳು ಅಗೆದು ಹಾಳು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಹಾಗೂ ಭಟ್ಕಳದಲ್ಲಿ ಒಳ ಚರಂಡಿ ಯೋಜನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಂಡು, ಯೋಜನೆಯ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ಕರೆದು ಅಗತ್ಯ ಮಾಹಿತಿ ನೀಡುವಂತೆ ಮತ್ತು ನಗರ ಸ್ಥಳೀಯ ಸಂಸ್ಥೆಯ ಸಮನ್ವಯದೊಂದಿಗೆ ಕಾಮಗಾರಿ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.‌

ಇದನ್ನೂ ಓದಿ: Job Recruitment: ನಮ್ಮ ಮೆಟ್ರೋದಲ್ಲಿದೆ ಉದ್ಯೋಗ ಅವಕಾಶ; ಕೂಡಲೇ ಅರ್ಜಿ ಸಲ್ಲಿಸಿ

ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌, ಜಿ.ಪಂ. ಸಿಇಒ ಈಶ್ವರ ಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಕೆಡಿಪಿ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version