ಯಲ್ಲಾಪುರ: ಛತ್ರಪತಿ ಶಿವಾಜಿ ಮಹಾರಾಜರನ್ನು ವರ್ಷಕ್ಕೊಮ್ಮೆ ಸ್ಮರಿಸಿದರೆ ಸಾಲದು, ಅವರ ಆದರ್ಶಗಳು ಪ್ರತಿಯೊಬ್ಬರ ಮನದಲ್ಲಿ ಸ್ಥಾಪನೆಯಾಗಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ (Uttara Kannada News) ತಿಳಿಸಿದರು.
ಪಟ್ಟಣದ ಶಿವಾಜಿ ವೃತ್ತದ ಬಳಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ, ಬಳಿಕ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರನ್ನು ಪ್ರತಿನಿತ್ಯ ನಾವು ಸ್ಮರಣೆ ಮಾಡಬೇಕು. ಅಂದಾಗ ಮಾತ್ರ ಮತ್ತೆ ನಮ್ಮ ಭಾರತವನ್ನು ಪರಿಪೂರ್ಣಗೊಳಿಸುವ ನಮ್ಮೆಲ್ಲರ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದರು.
ಇಂದು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ಕೋಟ್ಯಾಂತರ ರೂಪಾಯಿಗಳ ಸಾಲವನ್ನು ಮಾಡಿ, ಬಜೆಟ್ ಮಂಡಿಸಿದೆ. ಪ್ರತಿ ಹೆಜ್ಜೆಯಲ್ಲಿಯೂ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಯೂ ಸಹ ಕೇವಲ ಒಂದು ಸಮುದಾಯಕ್ಕನುಗುಣವಾಗಿ ವೇಳಾಪಟ್ಟಿಯನ್ನು ಸಿದ್ದಪಡಿಸುತ್ತಿದೆ.
ಇದನ್ನೂ ಓದಿ: Summer Sweating: ಬೇಸಿಗೆಯಲ್ಲಿ ಬೆವರಿನ ದುರ್ಗಂಧ ದೂರ ಮಾಡುವುದು ಹೇಗೆ?
ಶಾಲೆಗಳಲ್ಲಿ ಈ ಹಿಂದೆ ಇದ್ದಂತಹ, ʼಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾʼ ಎಂಬ ಎನ್ನುವ ಘೋಷವಾಕ್ಯ ಬದಲಾಯಿಸಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಮಾಡಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳಿಂದ ಪ್ರೇರಣೆ ಪಡೆದು ರಚಿಸಿದ ಘೋಷವಾಕ್ಯವನ್ನು ತಿರುಚಿರುವುದು ರಾಷ್ಟ್ರಕವಿಗೆ ಮಾಡಿದ ಅಪಮಾನವಾಗಿದೆ ಎಂದು ಆರೋಪಿಸಿದರು.
ಮಕ್ಕಳ ಮನಸ್ಸಿನಲ್ಲೂ ಬದಲಾವಣೆ ತರಲು ಹೊರಟಿರುವ ಸರ್ಕಾರ ತನ್ನ ಉದ್ದೇಶ, ಗುರಿಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತಾ ಸಾಗುತ್ತಿರುವಂತೆ ತೋರುತ್ತಿದೆ. ಇವೆಲ್ಲವುಗಳಿಂದ ನಮ್ಮ ಮಕ್ಕಳನ್ನು, ನಮ್ಮ ಭವಿಷ್ಯವನ್ನು ಹಾಗೂ ನಮ್ಮ ದೇಶವನ್ನು ಕಾಯ್ದುಕೊಳ್ಳಲು ನಾವೆಲ್ಲ ಒಂದಾಗಿ ದೇಶದಾದ್ಯಂತ ಶಿವಾಜಿ ಮಹಾರಾಜರ ಸಾಹಸ ಹಾಗೂ ಅಸ್ಮಿತೆಯನ್ನು ಸಾರುವ ಅವಶ್ಯವಿದೆ ಎಂದು ತಿಳಿಸಿದರು.
ಇದನ್ನೂ ಓದಿ: Jio Airfiber: ಈಗ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರ, 200ಕ್ಕೂ ಹೆಚ್ಚು ನಗರಗಳಲ್ಲಿ ಜಿಯೋಏರ್ ಫೈಬರ್!
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಗಾಂವ್ಕರ್, ಪಟ್ಟಣ ಪಂಚಾಯಿತಿ ಸದಸ್ಯ ಸೋಮೇಶ್ವರ ನಾಯ್ಕ, ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ, ಪ್ರಮುಖರಾದ ಪ್ರದೀಪ್ ಯಲ್ಲಾಪುರಕರ, ವಿನೋದ ತಳೇಕರ್, ರವಿ ದೇವಡಿಗ, ಮರಾಠಾ ಸಮಾಜದ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.