ಕಾರವಾರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮವಾದ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ ಸೂಚನೆ (Uttara Kannada News) ನೀಡಿದರು.
ಜಿಲ್ಲೆಯ ಶಿರಸಿ ತಾಲೂಕಿನ ವಾನಳ್ಳಿ, ಸಾಲ್ಕಣಿ, ಮೇಲಿನ ಓಣಿಕೇರಿ, ಹಾಗೂ ಹುಣಸೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮಕ್ಕಳಿಗೆ ಶಾಲೆಯಲ್ಲಿ ನೀಡುವ ಆಹಾರದ ಗುಣಮಟ್ಟ, ಆಹಾರದ ಪ್ರಮಾಣ, ದಾಖಲೆಗಳ ನಿರ್ವಹಣೆ ಹಾಗೂ ಶಾಲಾ ಕೊಠಡಿ, ಗ್ರಂಥಾಲಯ ಇತರೆ ವಿಷಯಗಳ ಕುರಿತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಇದನ್ನೂ ಓದಿ: Job Alert: ಪದವೀಧರರಿಗೆ ಗುಡ್‌ನ್ಯೂಸ್; SCDCC ಬ್ಯಾಂಕ್‌ನಲ್ಲಿದೆ 123 ಹುದ್ದೆ: ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಶಾಲೆಯಲ್ಲಿನ ಅಡುಗೆ ಕೋಣೆ ಸ್ವಚ್ಛವಾಗಿರಬೇಕು. ಅಲ್ಲದೇ ಮಕ್ಕಳಿಗೆ ನೀಡಲಾಗುವ ಪೌಷ್ಟಿಕ ಆಹಾರ ಸರಿಯಾಗಿ ವಿತರಣೆಯಾಗಬೇಕು, ಆಹಾರ ಶೇಖರಣಾ ಕೊಠಡಿಯು ಶುದ್ಧವಾಗಿದ್ದು, ಭದ್ರವಾಗಿರಬೇಕು. ಅವಧಿ ಮೀರಿದ ಹಾಗೂ ಶುದ್ಧವಿಲ್ಲದ ಅಕ್ಕಿ, ಬೇಳೆಕಾಳುಗಳ ಬಳಕೆ ಮಾಡದಂತೆ ಅವರು ಸೂಚನೆ ನೀಡಿದರು.
ಇದೇ ವೇಳೆ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ಪಡೆದು ನರೇಗಾದಡಿ ಮಾನವದಿನಗಳ ಸೃಜನೆ, ಕಾಮಗಾರಿಯಲ್ಲಿ ಪ್ರಗತಿ ಸಾಧನೆ, ಎಸ್‌ಬಿಎಂ, ವಸತಿ ಮನೆ ನಿರ್ಮಾಣ ಇತ್ಯಾದಿ ವಿಷಯಗಳ ಕುರಿತು ಪ್ರಗತಿ ಸಾಧಿಸುವಂತೆ ತಿಳಿಸಿದರು.
ಇದನ್ನೂ ಓದಿ: Kannada New Movie: ಮೈಸೂರಿನ 100 ವರ್ಷಗಳ ಹಳೇ ಮನೆಯಲ್ಲಿ ʼಫಾದರ್ʼ ಸಿನಿಮಾ ಚಿತ್ರೀಕರಣ
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿ ಬೆಂಚುಳ್ಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.