Site icon Vistara News

Uttara Kannada News: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ: ಹರಿಪ್ರಕಾಶ್‌ ಕೋಣೆಮನೆ

childrens summer camp closing ceremony at yallapur

ಯಲ್ಲಾಪುರ: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ. ಪಟ್ಟಣದ ಸವಲತ್ತುಗಳನ್ನು ನಾವು ಇಲ್ಲಿನ ಮಕ್ಕಳಿಗೆ ನೀಡಿದಾಗ ಮಾತ್ರ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್‌ ಕೋಣೆಮನೆ (Uttara Kannada News) ಅಭಿಪ್ರಾಯಪಟ್ಟರು.

ಪಟ್ಟಣದ ಗಾಂಧಿ ಕುಟೀರದಲ್ಲಿ ಶನಿವಾರ ಸಂಜೆ ರಂಗಸಹ್ಯಾದ್ರಿ ಬಳಗದ ವತಿಯಿಂದ ಹಮ್ಮಿಕೊಂಡ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಸಕ್ತಿ, ಸಮರ್ಪಣೆ ಹಾಗೂ ಬದ್ಧತೆ ಇಲ್ಲವೆಂದರೆ 17 ವರ್ಷಗಳಿಂದ ಸತತವಾಗಿ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲು ಸಾಧ್ಯವಾಗುತ್ತಿರಲಿಲ್ಲ. ಶಿಬಿರವನ್ನು ನಡೆಸುವುದು ಸವಾಲಿನ ಕೆಲಸ. ಮಕ್ಕಳು ಜೀವನದಲ್ಲಿ ಯಾವ ಉದ್ಯೋಗವನ್ನು ಆರಿಸುತ್ತಾರೆ ಎಂಬುದು ಮುಖ್ಯವಲ್ಲ. ಬದಲಾಗಿ ಕುಟುಂಬದ ಸಂಸ್ಕೃತಿ-ಸಂಸ್ಕಾರವನ್ನು ಉಳಿಸುವ, ಮನೆತನದ ಹಾಗೂ ಊರಿನ ಹೆಸರನ್ನು ಉಳಿಸುವ ಉತ್ತಮ ಪ್ರಜೆಯಾಗಬೇಕು. ಅಂತಹ ಅಭಿವ್ಯಕ್ತಿ ಕಲೆಗಳನ್ನು ಬೆಳೆಸುವ ಚಟುವಟಿಕೆಗಳು ನಮ್ಮ ವ್ಯಕ್ತಿತ್ವವನ್ನು ಅರಳಿಸುತ್ತವೆ. ಆ ಕೆಲಸವನ್ನು ಇಂತಹ ಶಿಬಿರಗಳು ಮಾಡುತ್ತಿವೆ ಎಂದರು.

ಇದನ್ನೂ ಓದಿ: Selco India: ಬೆಂಗಳೂರಿನಲ್ಲಿ ಮೇ 27ರಂದು ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ

ಮಕ್ಕಳಿಗೆ ತಿಳಿವಳಿಕೆ ಬರುವ ಮುನ್ನ ಕೇಳಿದ್ದನ್ನೆಲ್ಲ ಕೊಡಿಸುವ ಮೊದಲು ಹಲವು ಬಾರಿ ಪಾಲಕರು ಯೋಚಿಸಬೇಕು. ಮೊಬೈಲ್ ಬಳಕೆಯಿಂದ ಮನುಷ್ಯ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಬಲನಾಗುತ್ತಾನೆ. ತಂತ್ರಜ್ಞಾನ ನಮ್ಮೆಲ್ಲ ಪ್ರತಿಭೆಗಳನ್ನು ಹೊಸಕಿ ಹಾಕುತ್ತಿದೆ. ಭಾರತದ ಭವಿಷ್ಯ ಇಂತಹ ಸಣ್ಣ ಸಣ್ಣ ಊರುಗಳಲ್ಲಿವೆ. ಪಟ್ಟಣದ ಸವಲತ್ತುಗಳನ್ನು ನಾವು ಇಲ್ಲಿನ ಮಕ್ಕಳಿಗೆ ನೀಡಿದಾಗ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಾಧ್ಯ. ಯಾವುದೇ ಕೆಲಸ ಮಾಡಲು ಧೈರ್ಯ ಹೊಂದಿದವರು ಜೀವನದಲ್ಲಿ ಬೆಳೆಯುತ್ತಾರೆ. ಜೀವನ ಕೌಶಲ್ಯಗಳನ್ನು ಮಕ್ಕಳಿಗೆ ಕಲಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಈ ಸಂದರ್ಭದಲಿ ಪತ್ರಕರ್ತರಾದ ಟಿ. ಶಂಕರ್ ಭಟ್, ನಾಗರಾಜ ಮದ್ಗುಣಿ, ಪ್ರಮುಖರಾದ ವೆಂಕಟ್ರಮಣ ಭಟ್ ಸಹಸ್ರಳ್ಳಿ ಉಪಸ್ಥಿತರಿದ್ದರು. ರಂಗ ಸಹ್ಯಾದ್ರಿಯ ಅಧ್ಯಕ್ಷ ಡಿ.ಎನ್. ಗಾಂವ್ಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಾಯ ಭಟ್ ಆನೆಜಡ್ಡಿ ಕಾರ್ಯಕ್ರಮ ನಿರ್ವಹಿಸಿದರು. ಸುಮಂಗಲಾ ಜೋಶಿ ವಂದಿಸಿದರು.

ಇದನ್ನೂ ಓದಿ: Uttara Kannada News: ಕಾರವಾರ ನಗರಸಭೆ ತೆರಿಗೆ ಸಂಗ್ರಹಕ್ಕೆ ವೇಗ: ಡಿಸಿ

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

Exit mobile version