ಗೋಕರ್ಣ: ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ಮತ್ತು ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಭಾವ ರಾಮಾಯಣ-ರಾಮಾವತರಣ ಸರ್ಟಿಫಿಕೆಟ್ ಕೋರ್ಸ್ ಮತ್ತು ಅಲ್ಪಾವಧಿ ಕೋರ್ಸ್‍ಗಳ ತರಗತಿಗಳು ಮಂಗಳವಾರ (Uttara Kannada News) ಆರಂಭವಾದವು.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಅವರು 40 ನಿಮಿಷಗಳ ಕಾಲ ಭಾವರಾಮಾಯಣ ತರಗತಿ ನಡೆಸಿಕೊಟ್ಟರು.
ರಾಮಾಯಣದ ಅನುಸಂಧಾನ ಅನಿರ್ವಚನೀಯ ಆನಂದವನ್ನು ಕೊಡುವಂಥದ್ದು. ಬದುಕಿಗೆ ಯಾವುದು ಹಿತ ಯಾವುದು ಅಹಿತ ಎನ್ನುವುದನ್ನು ರಾಮಾಯಣ ತಿಳಿಸಿಕೊಡುತ್ತದೆ. ಬದುಕಿನ ಪುರುಷಾರ್ಥಗಳ ಸಾಧನೆಗೆ ರಾಮಾಯಣ ಸಾಧನ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ವಿಶ್ಲೇಷಿಸಿದರು.
ಇದನ್ನೂ ಓದಿ: Ooty Tour: ಪ್ರತಿ ಸೀಸನ್‌ನಲ್ಲೂ ಭಿನ್ನ ಅನುಭವ! ನಿಮ್ಮ ಊಟಿ ಪ್ರವಾಸ ಯಾವಾಗ?
ರಾಮಾಯಣವನ್ನು ವಾಲ್ಮೀಕಿ ಸೀತಾಚರಿತೆ ಎಂದೂ ಕರೆದಿದ್ದಾರೆ. ರಾಮಾವತರಣದ ಕೊನೆಯಲ್ಲಿ ಬ್ರಹ್ಮ ಹೇಳುವಂತೆ ರಾಮ ಸಾಕ್ಷಾತ್ ವಿಷ್ಣುವಿನ ಅವತಾರ, ಸೀತೆ ಲಕ್ಷ್ಮಿಯ ಅವತಾರ. ರಾವಣ ಸಂಹಾರಕ್ಕಾಗಿ ವಿಷ್ಣು ಮನುಷ್ಯ ರೂಪದಲ್ಲಿ ಭುವಿಗೆ ಅವತರಿಸುತ್ತಾನೆ ಎಂದು ಶ್ರೀಗಳು ತಿಳಿಸಿದರು. ಬದುಕಿನಲ್ಲಿ ನಮಗೆ ಬೇಕಾದ ಎಲ್ಲವನ್ನೂ ಕೊಡುವಂಥದ್ದು ರಾಮಾಯಣ. ಇದರ ಅನುಸಂಧಾನದ ಮೂಲಕ ಬದುಕು ಸಾರ್ಥಕಪಡಿಸಿಕೊಳ್ಳೋಣ ಎಂದು ಶ್ರೀಗಳು ಕರೆ ನೀಡಿದರು.
ಝೂಮ್ ಮಾಧ್ಯಮದ ಮೂಲಕ ಶ್ರೀಗಳು ತರಗತಿ ನಡೆಸಿಕೊಟ್ಟರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಕೂಡಾ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: WhatsApp Update: ಅಪ್‌ಡೇಟ್ ಆಗಲಿದೆ ವಾಟ್ಸ್‌ಆಪ್ ಚಾನೆಲ್; ಹೊಸ ಆಪ್ಶನ್ ಏನೇನು?
ಕಾರ್ಯಕ್ರಮದಲ್ಲಿ ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಪ್ರೊ.ಕೆ.ಎಸ್.ಕಣ್ಣನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕೃತ ವಿವಿ ಕುಲಸಚಿವ ಡಾ.ರಾಮಕೃಷ್ಣ ಭಟ್ ಕೂಟೇಲು ನಿರೂಪಿಸಿದರು.