ಕಾರವಾರ: ಜಾರ್ಖಂಡ್‌ನ ಕಾಂಗ್ರೆಸ್ ಸಂಸದರ ಮನೆಯಲ್ಲಿ 300 ಕೋಟಿಗೂ ಅಧಿಕ ಅಕ್ರಮ ಹಣ ಪತ್ತೆಯಾಗಿರುವಂತೆ, ರಾಜ್ಯದಲ್ಲೂ ಕಾಂಗ್ರೆಸ್ (Congress) ಭ್ರಷ್ಟಾಚಾರದಲ್ಲಿ (Corruption) ಮುಳುಗಿ ಹೋಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದ್ದಾರೆ.
ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಮನೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣ ಪತ್ತೆಯಾಗಿರುವುದರ ವಿರುದ್ಧ ನಗರದ ಸುಭಾಷ್ ವೃತ್ತದಲ್ಲಿ ಕಾರವಾರ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಅಕ್ರಮ ಹಣ ಪತ್ತೆಯಾಗಿರುವ ಹಿನ್ನಲೆಯಲ್ಲಿ ಕೂಡಲೇ ಕಾಂಗ್ರೆಸ್ ಸಂಸದನನ್ನು ಬಂಧಿಸುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಜನಕ, ಅಭಿವೃದ್ಧಿಗೆ ಮಾರಕವಾಗಿದೆ. ಭಯೋತ್ಪಾದಕತೆಯ ವಿಚಾರಧಾರೆಗಳಿಗೆ ಪ್ರೋತ್ಸಾಹದಾಯಕವಾದ ಆಡಳಿತವನ್ನು ಕಾಂಗ್ರೆಸ್ ನೀಡುತ್ತಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡಿ, ತುಷ್ಟೀಕರಣದ ನೀತಿಗೆ ಪೂರಕವಾಗಿ ಕಾಂಗ್ರೆಸ್ ಇರುವುದು ಕಂಡುಬರುತ್ತಿದೆ. ಕಳೆದ 60-70 ವರ್ಷಗಳಲ್ಲಿ ದೇಶದಲ್ಲಿ ಆಡಳಿತ ಮಾಡಿರುವ ಕಾಂಗ್ರೆಸ್ ಜನತೆಗೆ ನ್ಯಾಯ ಕೊಟ್ಟಿಲ್ಲ ಎಂದು ಆರೋಪಿಸಿದ ಅವರು, ಆದರೆ ಕಳೆದ ಒಂಭತ್ತೂವರೆ ವರ್ಷಗಳಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಹಿಂದೆಂದೂ ಕಾಣದ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.
ಇದನ್ನೂ ಓದಿ: Uttara Kannada News: ಉ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ರೋಗ; ಜನರಲ್ಲಿ ಹೆಚ್ಚಿದ ಆತಂಕ
ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಬಿಜೆಪಿ ಸನ್ನದ್ಧವಾಗಿದೆ. ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತ ಮಾಡುವ ಪ್ರಧಾನಿ ಮೋದಿಯವರ ಗ್ಯಾರೆಂಟಿಯೊಂದಿಗೆ ದೇಶದ ಜನತೆ ಇದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಅಭಿವೃದ್ಧಿ ಕುರಿತು ಯೋಚಿಸದೇ, ಕೇವಲ ಹಣ ಸಂಗ್ರಹದಲ್ಲಿ ತೊಡಗಿದ್ದಾರೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲಿ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ, ಅದಕ್ಕೆ ಸ್ಪಂದಿಸಲಿ. ಅದನ್ನು ಬಿಟ್ಟು ಕಾಂಗ್ರೆಸ್ ಹಣ ಸಂಗ್ರಹದಲ್ಲಿ ತೊಡಗಿಕೊಂಡಿದೆ. ಹೀಗಾಗಿ ಇದರ ವಿರುದ್ಧ ಜನರನ್ನು ಜಾಗೃತಗೊಳಿಸಿ ಬಿಜೆಪಿ ಹೋರಾಟಕ್ಕೆ ಇಳಿದಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಕಾಶ್ಮೀರದಲ್ಲಿ 370 ರದ್ದತಿಯ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದಕ್ಕೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ಅಭಿನಂದಿಸಿದರು. ದೇಶ ವಿರೋಧಿ ಕೆಲಸಗಳಲ್ಲೇ ಹೆಚ್ಚು ಆಸಕ್ತಿವಹಿಸಿರುವ ಕಾಂಗ್ರೆಸ್, ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸಿದ್ದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆಹೋಗಿತ್ತು. ಆದರೆ ಇಂದು ಹೊರಬಿದ್ದಿರುವ ಸುಪ್ರೀಂಕೋರ್ಟ್ ನಿರ್ಣಯ ದೇಶದ ಅಖಂಡತೆ, ಏಕತೆ, ಸಮಗ್ರತೆಗೆ ಇನ್ನಷ್ಟು ಶಕ್ತಿ ಕೊಟ್ಟಿದೆ. 4 ವರ್ಷಗಳಲ್ಲಿ ಕಾಶ್ಮೀರ ಜಗತ್ತಿನ ಪ್ರವಾಸಿ ಕೇಂದ್ರವಾಗಲು ಇದು ನೆರವಾಗಿದೆ. ಕಾಶ್ಮೀರದಲ್ಲಿನ ಜನಜೀವನ ಸುಗಮವಾಗಿ, ಶಾಂತಿ-ಸುವ್ಯವಸ್ಥೆ ನಿರ್ಮಾಣವಾಗಲು 370 ರದ್ದತಿ ಸಹಕಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: Uttara Kannada News: ಯಲ್ಲಾಪುರದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಆಗ್ರಹ, ಬೃಹತ್ ಮೆರವಣಿಗೆ
ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದಿಂದ ಅಭ್ಯರ್ಥಿ ಯಾರು ಎನ್ನುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದ ಹಿನ್ನೆಲೆ ಪಕ್ಷಕ್ಕೆ ಇನ್ನಷ್ಟು ಹುರುಪು ಬಂದಿದೆ. ಕೆನರಾ ಕ್ಷೇತ್ರವನ್ನೂ ಸೇರಿದಂತೆ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿಯು ಗೆಲುವು ಸಾಧಿಸುತ್ತದೆ. ಜಿಲ್ಲೆಯ ಕೆನರಾ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿ ನಿರ್ಧಾರವಾಗಿದೆ. ಜನರ ಮನಸ್ಸಿನಲ್ಲೂ ಸ್ಪಷ್ಟವಾಗಿದ್ದು, ಕಮಲದ ಹೂವೇ ನಮ್ಮ ಅಭ್ಯರ್ಥಿ ಎಂದರು. ಮುಂದಿನ ದಿನಗಳಲ್ಲಿ ವ್ಯಕ್ತಿ ಯಾರು ಎನ್ನುವುದನ್ನು ಪಕ್ಷ ತಿಳಿಸುತ್ತದೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲಾ ಕಾರ್ಯಕರ್ತರೂ ಬದ್ದರಾಗಿದ್ದೇವೆ. ಯಾರಿಗೇ ಟಿಕೆಟ್ ನೀಡಿದರೂ ನಮ್ಮೆಲ್ಲರ ಸಂಪೂರ್ಣ ಬೆಂಬಲ ಇದೆ ಎಂದರು.
ಪ್ರತಿಭಟನೆಗೂ ಮುನ್ನ ನಗರದ ನಗರಸಭೆ ಉದ್ಯಾನವನದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿ ಮುಖಂಡರು, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಬಳಿಕ ಸುಭಾಷ್ ವೃತ್ತದಲ್ಲಿ ಸುಭಾಷ್ ಚಂದ್ರ ಭೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಇದನ್ನೂ ಓದಿ: Child Care Center: ನರೇಗಾ ಕೂಲಿಕಾರರ ಮಕ್ಕಳಿಗಾಗಿ ಸುಸಜ್ಜಿತ ಶಿಶುಪಾಲನಾ ಕೇಂದ್ರ
ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪ್ರಮುಖರಾದ ವಕೀಲ ನಾಗರಾಜ ನಾಯಕ, ನಗರಸಭಾ ಮಾಜಿ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.