Site icon Vistara News

Uttara Kannada News: ಸ್ಥಳೀಯ ಯುವ ಜನತೆಗೆ ಉದ್ಯೋಗವಕಾಶ ಸೃಷ್ಟಿಸಿ: ಡಾ. ರಮಣ ರೆಡ್ಡಿ

Create employment opportunities for local youth says Dr Raman Reddy

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯುವಜನತೆಗೆ ಕಾರವಾರದ ನೌಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಮತ್ತು ನೌಕಾ ನೆಲೆಯಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸುವಂತೆ ಹಾಗೂ ಈ ಕುರಿತು ಅಗತ್ಯವಿರುವ ಕೌಶಲ್ಯ ತರಬೇತಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ. ಇ.ವಿ. ರಮಣರೆಡ್ಡಿ (Uttara Kannada News) ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರವಾರದ ನೌಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಉದ್ಯೋಗಗಳನ್ನು ಒದಗಿಸಲು ಮತ್ತು ನೌಕಾ ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗವಕಾಶಗಳನ್ನು ಸ್ಥಳೀಯ ಯುವಜನತೆ ಒದಗಿಸುವ ಮೂಲಕ ಸ್ಥಳೀಯರಿಗೆ ಆರ್ಥಿಕ ಭದ್ರತೆ ಒದಗಿಸಬಹುದಾಗಿದೆ.

ಪ್ರಸ್ತುತ ಈ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸಲು ಸ್ಥಳೀಯ ಯುವಜನತೆ ದೊರೆಯದ ಕಾರಣ ಹೊರರಾಜ್ಯದಿಂದ ಕಾರ್ಮಿಕರು ಬರುತ್ತಿದ್ದಾರೆ. ಈ ಕಾರ್ಮಿಕರಿಗೆ ಇಲ್ಲಿ ತಂಗಲು ವಸತಿ ವ್ಯವಸ್ಥೆ ಮತ್ತು ಊಟೋಪಚಾರದ ವ್ಯವಸ್ಥೆಯನ್ನೂ ಸಹ ಸಂಬಂಧಪಟ್ಟ ಕಾರ್ಮಿಕ ಏಜೆನ್ಸಿಗಳು ನೋಡಿಕೊಳುತ್ತಿದ್ದು ಅವರಿಗೂ ಸಹ ಇದು ಹೆಚ್ಚಿನ ಹೊರೆಯಾಗಿದೆ ಎಂದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ; ಇಂದಿನ ದರ ಇಷ್ಟಿದೆ

ಆದ್ದರಿಂದ ಕಾರವಾರದ ನೌಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಮತ್ತು ನೌಕಾ ನಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಲಭ್ಯವಿರುವ ಉದ್ಯೋಗವಕಾಶಗಳು, ಮಾನವ ಸಂಪನ್ಮೂಲದ ಬೇಡಿಕೆ ಮತ್ತು ಅದಕ್ಕೆ ಅಗತ್ಯವಿರುವ ಕೌಶಲ್ಯ ತರಬೇತಿಯ ಕುರಿತಂತೆ ಸಂಬಂಧಪಟ್ಟ ಸಂಸ್ಥೆಗಳಿಂದ ಮಾಹಿತಿ ಪಡೆದು, ಇಲ್ಲಿನ ಸ್ಥಳೀಯ ಯುವಜನತೆಗೆ ಕೌಶಲ್ಯ ತರಬೇತಿ ನೀಡುವುದರ ಮೂಲಕ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕೌಶಲ್ಯ ತರಬೇತಿ ಪಡೆದಿರುವ ಜಿಲ್ಲೆಯ ಸ್ಥಳೀಯ ಯುವಜನತೆಗೆ ನೌಕಾ ನೆಲೆಯಲ್ಲಿ ಅಪ್ರೆಂಟಿಸ್ ತರಬೇತಿ ನೀಡಲು ಎಲ್ಲಾ ವ್ಯವಸ್ಥೆಗಳನ್ನು ಒದಗಿಸುವುದಾಗಿ ನೌಕಾನೆಲೆಯ ಅಧಿಕಾರಿಗಳು ತಿಳಿಸಿದರು. ಸೂಕ್ತ ತರಬೇತಿ ಪಡೆದಿರುವ ಸ್ಥಳೀಯ ಯುವಜನತೆಗೆ ನೌಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಉದ್ಯೋಗವಕಾಶ ನೀಡುವುದಾಗಿ ಮಾನವ ಸಂಪನ್ಮೂಲ ಒದಗಿಸುವ ಸಂಸ್ಥೆಗಳ ಅಧಿಕಾರಿಗಳು ಸಭೆಗೆ ತಿಳಿಸಿದರು.

ಜಿಲ್ಲೆಯ ಎಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಗಳು, ಕಾರವಾರದ ನೌಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಮತ್ತು ನೌಕಾನೆಲೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯವಿರುವ ತಿಳುವಳಿಕೆ ಪತ್ರದ ಒಪ್ಪಂದ ಮಾಡಿಕೊಂಡು, ಸ್ಥಳೀಯ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಡಾ.ಇ.ವಿ.ರಮಣರೆಡ್ಡಿ ಸೂಚನೆ ನೀಡಿದರು.

ಇದನ್ನೂ ಓದಿ: Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಸೀಬರ್ಡ್ ನೌಕಾನಲೆ, ಕೌಶಲ್ಯಾಭಿವೃದ್ದಿ, ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version