ಯಲ್ಲಾಪುರ: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್ ರಸ್ತೆ (Bypass Road) ನಿರ್ಮಿಸುವ ಕುರಿತು ಒತ್ತಾಯಿಸಿ, ಡಿ.11 ರಂದು ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಯಲ್ಲಾಪುರ ನಗರ ಬೈಪಾಸ್ ರಸ್ತೆ ಹೋರಾಟ ಸಮಿತಿ ವತಿಯಿಂದ ತೀರ್ಮಾನಿಸಲಾಗಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ಹಾಗೂ ಹೋರಾಟ ಸಮಿತಿ ಸಂಚಾಲಕ ರಾಮು ನಾಯ್ಕ ತಿಳಿಸಿದರು.
ಪಟ್ಟಣದ ಫಾರೆಸ್ಟ್ ಐ.ಬಿ.ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯು ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿದ್ದು, ಪ್ರತಿನಿತ್ಯ ಸಂಚರಿಸುವ ಸಾವಿರಾರು ವಾಹನಗಳಿಂದಾಗಿ ಸಾರ್ವಜನಿಕರ, ವಿದ್ಯಾರ್ಥಿಗಳ ಹಾಗೂ ಸ್ಥಳೀಯ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಪಟ್ಟಣದಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಈಗಾಗಲೇ ಅಂಕೋಲಾ ತಾಲೂಕಿನ ಬಾಳೆಗುಳಿವರೆಗೆ ಚತುಷ್ಪಥ ರಸ್ತೆ ಆಗಿದ್ದು, ಮುಂದುವರೆದು ಯಲ್ಲಾಪುರದ ಮೂಲಕ ಈ ರಸ್ತೆ ಹಾದು ಹೋದಲ್ಲಿ, ಯಲ್ಲಾಪುರ ನಗರದಲ್ಲಿ ನಡೆದಾಡುವುದು ಸಹ ಕಷ್ಟ ಸಾಧ್ಯವಾಗಲಿದೆ.
ಇದನ್ನೂ ಓದಿ: T20 World Cup 2024: ನೂತನ ಲೋಗೋ ವಿನ್ಯಾಸಕ್ಕೆ ಫಿದಾ ಆದ ಕ್ರಿಕೆಟ್ ಅಭಿಮಾನಿಗಳು
ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂಚಿತವಾಗಿಯೇ ಬೈಪಾಸ್ ನಿರ್ಮಾಣಕ್ಕೆ ಸರ್ಕಾರ ಆದೇಶಿಸಬೇಕು. ಈ ಪ್ರಯುಕ್ತ ಡಿ. 11 ರಂದು ಬೆಳಗ್ಗೆ 10 ಗಂಟೆಗೆ ವೈಟಿಎಸ್‌ಎಸ್ ಮೈದಾನದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪಾಲಕರು, ಅಂಗಡಿಕಾರರೆಲ್ಲ ಸೇರಿ ಬೃಹತ್ ಮೆರವಣಿಗೆಯಲ್ಲಿ ಸಾಗಿ ತಹಶೀಲ್ದಾರರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸಾರ್ವಜನಿಕರು ಸಹ ತಮ್ಮ ಮಕ್ಕಳ ಸುರಕ್ಷತೆಗಾಗಿ, ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಅಗತ್ಯತೆಯ ಕುರಿತು ಮನದಟ್ಟು ಮಾಡಲು ಪಾಲ್ಗೊಳ್ಳುವಂತೆ ಕೋರಿದರು.
ಸಮಿತಿಯ ಪ್ರಮುಖರಾದ ರವಿ ಶ್ಯಾನಭಾಗ್ ಮಾತನಾಡಿ, ಹೆದ್ದಾರಿಯ ಅಕ್ಕ ಪಕ್ಕದ ಅಂಗಡಿಕಾರರು ಹೆಚ್ಚಿನದಾಗಿ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಇದೆ. ಬೈಪಾಸ್ ನಿರ್ಮಾಣವಾಗದೆ ಹೆದ್ದಾರಿ ಅಗಲೀಕರಣವಾದಲ್ಲಿ, ಯಲ್ಲಾಪುರದ ಬಹುತೇಕ ಅಂಗಡಿಗಳು ನೆಲೆ ಕಳೆದುಕೊಳ್ಳಲಿದೆ. ಹೀಗಾಗಿ ಮುಂದಿನ ಭವಿಷ್ಯಕ್ಕಾಗಿ ಪಾಲ್ಗೊಳ್ಳಬೇಕು. ಬೈಪಾಸ್ ನಿರ್ಮಾಣಕ್ಕೆ ಸಮಯ ಆಗಲಿದ್ದು, ಅಲ್ಲಿಯವರೆಗೆ ಟ್ರಾಫಿಕ್ ಪೊಲೀಸರ ತಂಡ ಪ್ರಾರಂಭಿಸಿ, ಟ್ರಾಫಿಕ್ ನಿರ್ವಹಣೆಯ ಕಾರ್ಯ ಮಾಡಬೇಕಿದೆ ಎಂದರು.
ಇದನ್ನೂ ಓದಿ: The Nandi Awards: ನಂದಿ ಫಿಲ್ಮ್ ಅವಾರ್ಡ್; ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಎ.ಎ. ಶೇಖ್, ಮಹ್ಮದ್ ಗೌಸ್, ವಕೀಲೆ ಬೇಬಿ ಅಮಿನಾ, ಸುರೇಶ್ ಬೊರಕರ, ಪ್ರಭಾಕರ ನಾಯ್ಕ, ಮಾಧವ ನಾಯಕ, ದಾಸಿಂತ್ ಫರ್ನಾಂಡಿಸ್, ಉಲ್ಲಾಸ್ ಮಹಾಲೆ, ವೇಣುಗೋಪಾಲ ಮದ್ಗುಣಿ, ಜಗನ್ನಾಥ ರೇವಣಕರ ಇದ್ದರು.