ಕಾರವಾರ: ಉತ್ತರ ಕನ್ನಡ (Uttara Kannada News) ಜಿಲ್ಲಾ ಪಂಚಾಯಿತಿಯಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಜನವರಿ ತಿಂಗಳ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ (PDO of the Month Award) ಭಾಜನರಾದ ಭಟ್ಕಳ ತಾ.ಪಂ. ಪ್ರಭಾರ ಸಹಾಯಕ ನಿರ್ದೇಶಕ, ಬೇಂಗ್ರೆ ಗ್ರಾ.ಪಂ. ಪಿಡಿಒ ಉದಯ ದುರ್ಗಪ್ಪ ಬೋರಕರ್ ಗೆ ಜಿ.ಪಂ. ಸಿಇಒ ಈಶ್ವರ ಕಾಂದೂ, ಕಚೇರಿಯಲ್ಲಿ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉದಯ ದುರ್ಗಪ್ಪ ಬೋರಕರ್, ಗ್ರಾಮ ಮಟ್ಟದಲ್ಲಿ ಸಮಸ್ಯೆಗಳ ನಿವಾರಣೆ ಹಾಗೂ ಜನರ ಜೀವನ ಸುಧಾರಣೆಗಾಗಿ ನಿರಂತರ ಶ್ರಮಿಸುವ ಪಿಡಿಒ ಗಳ ಕಾರ್ಯವನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಮೇಲಾಧಿಕಾರಿಗಳು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಅತ್ಯಂತ ಖುಷಿಯ ಜತೆಗೆ ಪ್ರಶಂಸನೀಯ ಸಂಗತಿಯಾಗಿದೆ. ಈ ತರಹದ ಪುರಸ್ಕಾರಗಳಿಂದ ಗ್ರಾಮೀಣ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಸಿಗುವಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರೇರಣೆ ಸಿಕ್ಕಂತಾಗಿದೆ ಎಂದರು.
ಇದನ್ನೂ ಓದಿ: ‘Kohli’s Kitchen’: ಕೊಹ್ಲಿ ಹೆಸರಿನಲ್ಲಿ ಬೆಂಗಳೂರು ಅಭಿಮಾನಿಯ ರೆಸ್ಟೋರೆಂಟ್; ಇಲ್ಲಿ ಏನೆಲ್ಲ ಸಿಗುತ್ತೆ?
ವಿಕೇಂದ್ರೀಕರಣ ವ್ಯವಸ್ಥೆಯಡಿ ಸ್ಥಾಪಿತವಾದ ಗ್ರಾಮ ಪಂಚಾಯಿತಿ ಗ್ರಾಮೀಣ ಜನರಿಗೆ ಅತೀ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತಹ ಮಹತ್ತರ ಪಾತ್ರವಹಿಸುತ್ತಿದೆ. ಇಲ್ಲಿ ಮೇಲಾಧಿಕಾರಿಗಳ ಮಾರ್ಗದರ್ಶನ, ಚುನಾಯಿತ ಜನಪ್ರತಿನಿಧಿಗಳ ಸಹಕಾರ, ಸಿಬ್ಬಂದಿ ವರ್ಗದವರ ಕಾರ್ಯ ನಿರ್ವಹಣೆಯಿಂದ ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದ್ದು, ಸಹಕರಿಸಿದ ಹಾಗೂ ಪ್ರಶಸ್ತಿಗೆ ಪರಿಗಣಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾರವಾರ ಉಪ ವಿಭಾಗಾಧಿಕಾರಿಗಳಾದ ಕನಿಷ್ಕ, ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್, ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ಎನ್.ಜಿ. ನಾಯಕ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Deepika Padukone: BAFTA ಪ್ರಶಸ್ತಿ ಸಮಾರಂಭ ನಿರೂಪಿಸುವವರ ತಂಡದಲ್ಲಿರುವ ಏಕೈಕ ಭಾರತೀಯ ನಟಿ ಈಕೆ!
ಉದಯ ದುರ್ಗಪ್ಪ ಬೋರಕರ್ ಡಿಎಡ್, ಬಿಎ ಪದವಿಧರರಾಗಿದ್ದು, 2016ರಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದ್ದಾರೆ. ಈ ಹಿಂದೆ ಶಿರಾಲಿ, ಹಾಡವಳ್ಳಿ ಹಾಗೂ ಮುಂಡಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬೇಂಗ್ರೆ ಗ್ರಾ.ಪಂ.ನಲ್ಲಿ ಪಿಡಿಒ ಹುದ್ದೆ ಕಾರ್ಯ ನಿರ್ವಹಿಸುವುದರ ಜತೆಗೆ ಭಟ್ಕಳ ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ಹುದ್ದೆಯ ಪ್ರಭಾರ ವಹಿಸಿಕೊಂಡಿದ್ದಾರೆ. ಇವರ ಕಾರ್ಯಾವಧಿಯಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಈ ಪ್ರಶಸ್ತಿ ಲಭಿಸಿವೆ.