ಯಲ್ಲಾಪುರ: ವಿಶ್ವದಲ್ಲಿ ಬಲಾಢ್ಯ ಧರ್ಮವೆಂದರೆ ಅದು ಸನಾತನ ಧರ್ಮವಾಗಿದೆ. ಸನಾತನ ಧರ್ಮವನ್ನು ಟೀಕಿಸುವ ವ್ಯಕ್ತಿಗಳನ್ನು ನಾವು ಸಂಘಟಿತರಾಗಿ ಎದುರಿಸಬೇಕಿದ್ದು, ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ಪರಸ್ಪರ ಸಾಮರಸ್ಯದಿಂದ ಸಮಾಧಾನದ ಬದುಕು ಕಂಡುಕೊಳ್ಳಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಳ್ಳಿ ಹೇಳಿದರು.
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಪ್ರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಕಾಲಘಟ್ಟದಲ್ಲಿ ಸನಾತನ ಧರ್ಮದ ಸಂರಕ್ಷಣೆ ಅನಿವಾರ್ಯವಾಗಿದ್ದು, ನಮ್ಮೊಳಗೆ ಹುಟ್ಟಿದ ಒಳಪಂಗಡಗಳಿಂದಲೇ ಸಂಘಟನೆಯ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಅಂತಹ ಒಳಪಂಗಡಗಳು ಬಹುಕಾಲ ಉಳಿಯಲಾರವು.
ಬೇರೆ ಸಮುದಾಯದವರನ್ನು ಟೀಕಿಸದೇ, ದ್ವೇಷಿಸದೇ ನಮ್ಮ ಸಮುದಾಯದ ಬೆಳವಣಿಗೆಯ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ. ಅಲ್ಲದೇ, ನಮ್ಮನ್ನು ನಾವು ಗುರುತಿಸಿಕೊಳ್ಳುವ ಪ್ರಮುಖ ಕೆಲಸ ಮಾಡಬೇಕಾಗಿದೆ ಎಂದರು.
ಇದನ್ನೂ ಓದಿ: Uttara Kannada News: ರಾಜ್ಯಕ್ಕೇ ವಿದ್ಯುತ್ ನೀಡುವ ಉತ್ತರ ಕನ್ನಡ ಜಿಲ್ಲೆಯಲ್ಲಿವೆ ಕರೆಂಟ್ ಇಲ್ಲದ 1680 ಮನೆಗಳು!
ವಿಪ್ರ ಸಮುದಾಯದ ಅಭಿವೃದ್ಧಿಗಾಗಿ ಸಂಘಟನೆ ಮಾಡಬೇಕಿರುವ ಕೆಲಸಗಳು ಸಾಕಷ್ಟಿವೆ. ಕೃಷಿ ಕ್ಷೇತ್ರ ಮತ್ತು ವಧುಕ್ಷಾಮ ಸೇರಿದಂತೆ ವಿವಿಧ ಬಗೆಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ನಮ್ಮ ಮಹಿಳಾ ಸಂಘಟನೆ ಮತ್ತಷ್ಟು ಬಲಗೊಳ್ಳಬೇಕಿದ್ದು, ಪ್ರತಿ ಜಿಲ್ಲೆಯಲ್ಲಿಯೂ ನಮ್ಮ ಸಮುದಾಯದವರಿಗೆ ಸಂಸ್ಕಾರ ನೀಡುವ ಕೇಂದ್ರಗಳು ಸ್ಥಾಪನೆಯಾಗಬೇಕಾಗಿದೆ ಎಂದು ತಿಳಿಸಿದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬ್ರಾಹ್ಮಣರ ಸಂಖ್ಯೆ ಕಡಿಮೆ ಇರುವಲ್ಲಿ ಸಂಘಟನೆ ಕ್ರಿಯಾಶೀಲವಾಗಿದೆ. ಆದರೆ, ಹೆಚ್ಚು ಜನ ಇರುವ ಪ್ರದೇಶದಲ್ಲಿ ಸಂಘಟನೆ ಕ್ಷೀಣವಾಗಿರುವುದು ವಿಪರ್ಯಾಸದ ಸಂಗತಿ.
ಇದನ್ನೂ ಓದಿ: Sirsi News: ಅಭಿವೃದ್ಧಿಗೆ ಪತ್ರಕರ್ತರೇ ಕಾರಣ: ಸಚಿವ ಮಂಕಾಳ ವೈದ್ಯ
ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರೂ ಸಂಘಟನೆಗಾಗಿ ಯಾವ ಕೊಡುಗೆ ನೀಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಬ್ರಾಹ್ಮಣರೆಂದು ಹೇಳಿಕೊಳ್ಳಲು ನಾವೆಲ್ಲಿಯೂ ಭಯ ಪಡಬೇಕಾಗಿಲ್ಲ. ಆದರೆ, ವೈಚಾರಿಕವಾಗಿ ಬಲಿಷ್ಟವಾಗಿರುವ ನಾವು, ಎಲ್ಲರ ಹಿತ ಬಯಸುವ ನಾವು, ನಮ್ಮ ಸಂಘಟನೆ ಕುಸಿತವಾಗುತ್ತಿರುವ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಸಂಘಟನೆಯ ಒಳಿತಿಗಾಗಿ ಸಾಧ್ಯವಿರುವ ಎಲ್ಲ ನೆರವನ್ನೂ ಸದಾ ನೀಡಲು ಸಿದ್ಧ ಎಂದರು.
ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಕೆ.ಬಿ.ಎಂ.ಎಸ್. ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಗೋವಿಂದ ಭಟ್ ಅಚವೆ, ಮಂಗಳಮೂರ್ತಿ ಸಭಾಪತಿ, ರಾಘವೇಂದ್ರ ಭಟ್, ಜಿಲ್ಲಾ ಸಂಚಾಲಕಿ ನಿರ್ಮಲಾ ಹೆಗಡೆ ಗೋಳಿಕೊಪ್ಪ, ಜಿ.ಎಂ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಕವಿತಾ ಭಟ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿದ್ವಾನ್ ಗಣಪತಿ ಭಟ್ ಕೋಲೀಬೇಣ ಸಭಾ ಪೂಜೆ ನೆರವೇರಿಸಿದರು. ತಾಲೂಕು ಸಂಚಾಲಕ ಟಿ.ಶಂಕರ್ ಭಟ್ ಸ್ವಾಗತಿಸಿದರು. ಚಂದ್ರಕಲಾ ಭಟ್ ನಿರೂಪಿಸಿದರು.
ಇದನ್ನೂ ಓದಿ: Ballari News: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 17 ಲಕ್ಷ ರೂ. ಮೌಲ್ಯದ ಗಾಂಜಾ ವಶ
ಎ.ಕೆ.ಬಿ.ಎಂ.ಎಸ್. ಜಿಲ್ಲಾ ಪ್ರತಿನಿಧಿ ಶಂಕರ ಭಟ್ಟ ತಾರೀಮಕ್ಕಿ ಸ್ವಾಗತಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ರಾಯ್ಸದ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ತಾಲೂಕಾ ಕಾರ್ಯದರ್ಶಿ ಕುಮಾರ ಭಟ್ಟ ವಂದಿಸಿದರು.