Site icon Vistara News

Uttara Kannada News: ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಶಿವರಾಮ ಹೆಬ್ಬಾರ್‌ ಸೂಚನೆ

MLA Shivaram Hebbar spoke at the Drought Management Taskforce Committee meeting in Yallapur

ಯಲ್ಲಾಪುರ: ರೈತರಿಗೆ ಸೂಕ್ತ ಪರಿಹಾರ ಹಾಗೂ ಕುಡಿಯುವ ನೀರಿನ (Drinking Water) ವ್ಯವಸ್ಥೆ ಅತ್ಯಂತ ಆದ್ಯತೆಯಲ್ಲಿಡಬೇಕಾದ ಅಂಶವಾಗಿದೆ. ಈ ಕುರಿತು ಎಲ್ಲಾ ಅಧಿಕಾರಿಗಳು ಜನರಿಗೆ ತುರ್ತಾಗಿ ಸ್ಪಂದಿಸಬೇಕು, ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಿದಾಗ ಬರಗಾಲವನ್ನು (Drought) ಯಶಸ್ವಿಯಾಗಿ ಎದುರಿಸಬಹುದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್‌ ತಿಳಿಸಿದರು.

ಪಟ್ಟಣದ ಆಡಳಿತ ಸೌಧದಲ್ಲಿ ಸೋಮವಾರ ನಡೆದ ಬರಗಾಲ ನಿರ್ವಹಣೆಯ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನೀರಿನ ಕೊರತೆ ಉಂಟಾಗುವ ಪ್ರದೇಶಗಳನ್ನು ಈಗಿನಿಂದಲೇ ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಿ. ತಾಲೂಕಿನ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಮುಂದಿನ 4 ರಿಂದ 5 ತಿಂಗಳುಗಳ ಕಾಲ ನೋಡಲ್ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿದ್ದು, ಜನರ ಅಗತ್ಯತೆಗಳಿಗೆ ಸ್ಪಂದಿಸಿ. ಜನರಿಗೆ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಿ ಎಂದು ಸೂಚಿಸಿದರು.

ಅನಿವಾರ್ಯವಿದ್ದಲ್ಲಿ ಮಾತ್ರ ಹೊಸ ಬೋರ್‌ವೆಲ್ ಗಳನ್ನು ಕೊರೆಯಿಸಿ. ಸಾಧ್ಯವಿದ್ದಲ್ಲಿ ಟ್ಯಾಂಕರ್ ಹಾಗೂ ಖಾಸಗಿ ಬೋರವೆಲ್ ಗಳ ಮೂಲಕ ನೀರಿನ ಪೂರೈಕೆಗೆ ಕ್ರಮ ವಹಿಸಿ. ಮಂಚಿಕೇರಿ ಪಟ್ಟಣದಲ್ಲಿ ಅತಿ ಹೆಚ್ಚಿನ ನೀರಿನ ಕೊರತೆ ಉಂಟಾಗಲಿದೆ. ಹೀಗಾಗಿ ತೂಕದಬೈಲ್‌ನಿಂದ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಿ. ಪಟ್ಟಣದಲ್ಲಿ ಸಹ ಈವರೆಗೆ ಯಾವುದೇ ಸಮಸ್ಯೆ ಆಗಿಲ್ಲ. ಮುಂದೆಯೂ ಸಹ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ. ಹೆಚ್ಚಿನ ಪಂಪ್‌ಗಳನ್ನು ಇಟ್ಟುಕೊಂಡಿರಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: Co-Operative week : ಸರ್ಕಾರಿ ಹಣ ಸಹಕಾರ ಬ್ಯಾಂಕ್‌ನಲ್ಲೇ ಠೇವಣಿಗೆ ಚಿಂತನೆ; ಸಿದ್ದರಾಮಯ್ಯ

ಕೃಷಿ ಇಲಾಖೆಯಿಂದ 80% ರಷ್ಟು ಎಫ್‌ಐಡಿ ದಾಖಲಾತಿ ಆಗಿದೆ. ಆದಷ್ಟು ಬೇಗ ಇದು ಪೂರ್ಣಗೊಂಡಲ್ಲಿ ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಂಪೂರ್ಣ ಸವಲತ್ತು ದೊರೆಯುತ್ತದೆ. ರೈತರ ಕೃಷಿ ಜಮೀನಿನ ಸರ್ವೆ ನಡೆಸುವಾಗ, ಅಧಿಕಾರಿಗಳು ಸರಿಯಾಗಿ ಕೃಷಿ ವಿಮೆ ದೊರಕುವಂತೆ ನಿಗಾವಹಿಸಬೇಕು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾನದಂಡಗಳ ಮೂಲಕ ನಮ್ಮ ತಾಲೂಕು ಅತಿ ಹೆಚ್ಚು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದೆ. ಹೀಗಾಗಿ ಬೆಳೆ ಹಾನಿಯ ವರದಿಯೂ ಅದಕ್ಕೆ ಪೂರಕವಾಗಿರಬೇಕು. ರೈತರಿಗೆ ನ್ಯಾಯ ದೊರಕಬೇಕು. ಕೆಎಂಎಫ್ ಗಳ ಮೂಲಕ ರೈತರಿಗೆ ಹೆಚ್ಚಿನ ಮೇವನ್ನು ಒದಗಿಸುವ ಪ್ರಯತ್ನ ಮಾಡಿ. ಪಟ್ಟಣದಲ್ಲಿ ಬಿಡಾಡಿ ದನಗಳಲ್ಲಿಯೂ ರೋಗ ಹರಡುವ ಸಾಧ್ಯತೆಯಿದ್ದು, ಅದರ ಮಾಲೀಕರು ಎಚ್ಚರಿಕೆ ವಹಿಸಬೇಕು ಎಂದರು.

ಎಸಿ ದೇವರಾಜ್ ಆರ್. ಮಾತನಾಡಿ, ಅಧಿಕಾರಿಗಳು ನಿಮ್ಮ ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ನೀರಿನ ಲಭ್ಯತೆಯಿದೆ, ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಅಂದಾಜು ಎಷ್ಟು ದಿನಗಳಿಗೆ ನೀರಿನ ಪೂರೈಕೆ ಸಾಧ್ಯವಿದೆ ಎಂಬುದರ ಅಂಕಿ ಅಂಶ ತಯಾರಿಡಬೇಕು. ಜಾನುವಾರುಗಳಿಗೆ ಒಣ ಮೇವಿನ ಲಭ್ಯತೆ ಹಾಗೂ ಒಣಗಿರುವ ಬೆಳೆಗಳನ್ನು ಮೇವಾಗಿ ಸಂರಕ್ಷಿಸಿಡಲು ಪ್ರಯತ್ನಿಸಬೇಕು ಎಂದರು.

ಇದನ್ನೂ ಓದಿ: Acid Reflux: ನಿಮಗೆ ಗೊತ್ತಿರಲಿ, ಚಳಿಗಾಲಕ್ಕೂ ಹುಳಿತೇಗಿಗೂ ಇದೆ ಸಂಬಂಧ!

ಈ ಸಂದರ್ಭದಲ್ಲಿ ತಹಸೀಲ್ದಾರ್ ಗುರುರಾಜ್ ಎಂ., ಗ್ರೇಡ್‌-2 ತಹಸೀಲ್ದಾರ್‌ ಸಿ.ಜಿ.‌ ನಾಯ್ಕ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಪ.ಪಂ. ಮುಖ್ಯಾಧಿಕಾರಿ ಸುನಿಲ್ ಗಾವಡೆ, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳು ಹಾಜರಿದ್ದು ಮಾಹಿತಿ ನೀಡಿದರು.

Exit mobile version