ಕಾರವಾರ: ಕಾರವಾರ ತಾಲೂಕಿನ ಜಲಾವೃತ ಪ್ರದೇಶಗಳಿಗೆ ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ, ಭೇಟಿ ನೀಡಿ, ಜನತೆಯ ಅಹವಾಲನ್ನು (Uttara kannada News) ಆಲಿಸಿದರು.
ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಗಾ, ಐಸ್‌ಫ್ಯಾಕ್ಟರಿ ಚೆಂಡಿಯಾ, ಪೋಸ್ಟ್ ಚೆಂಡಿಯಾ, ಇಡೂರು ಸೇರಿದಂತೆ ವಿವಿಧ ಭಾಗದ ಜಲಾವೃತವಾಗಿ ತೊಂದರೆಗೊಳಗಾದ ಜನತೆಯ ಅಹವಾಲನ್ನು ಆಲಿಸಿದರು. ಜನತೆಯೊಂದಿಗೆ ತಾವಿರುವುದಾಗಿ ಭರವಸೆ ನೀಡಿದರು.
ಚತುಷ್ಪಥ ಹೆದ್ದಾರಿ ಅಗಲೀಕರಣ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ಕಂಪನಿಯು ಅವೈಜ್ಞಾನಿಕ ಕಾಮಗಾರಿ ಹಾಗೂ ನೌಕಾನೆಲೆ ಕಾಮಗಾರಿಗಳಿಂದ ಸಮುದ್ರಕ್ಕೆ ಸೇರುವ ನೀರಿಗೆ ತಡೆಯಾಗುತ್ತಿರುವುದರಿಂದ ಇಂತಹ ಸಮಸ್ಯೆಗಳು ಮರುಕಳಿಸುತ್ತಿದೆ ಎಂದು ತಿಳಿಸಿದ ರೂಪಾಲಿ ಎಸ್. ನಾಯ್ಕ, ನೌಕಾನೆಲೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಈ ಹಿಂದೆ ತಾವು ಶಾಸಕರಾಗಿರುವಾಗಲೂ ನೀರು ಹರಿದುಹೋಗಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ಆದರೆ ಅಗತ್ಯ ಕ್ರಮ ಕೈಗೊಳ್ಳದೇ ಇರುವುದರಿಂದ ಎಲ್ಲೆಡೆ ನೀರು ತುಂಬುತ್ತಿದೆ. ಜನತೆ ಮೇಲಿಂದ ಮೇಲೆ ತೊಂದರೆ ಅನುಭವಿಸುವಂತಾಗಿದೆ ಎಂದರು.
ಇದನ್ನೂ ಓದಿ: KSRTC Package Tour: ಜೋಗ ಜಲಪಾತ ವೀಕ್ಷಣೆಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್!
ಇಲ್ಲಿನ ಜನತೆ ನೌಕಾನೆಲೆಗಾಗಿ, ರಾಷ್ಟ್ರಕ್ಕಾಗಿ ಮನೆ, ಆಸ್ತಿ ಪಾಸ್ತಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ನೌಕಾನೆಲೆ ಸಹಕರಿಸದೇ ಇದ್ದರೆ ಹೇಗೆ. ನೀರು ತುಂಬದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನೀರು ಸರಾಗವಾಗಿ ಹರಿದುಹೋಗಲು ಇರುವ ಅಡ್ಡಿಯನ್ನು ನಿವಾರಿಸಿ ಶಾಶ್ವತ ಕ್ರಮ ಕೈಗೊಳ್ಳುವಂತೆ ನೌಕಾನೆಲೆ ಅಧಿಕಾರಿಗಳಿಗೆ ತಾಕೀತು ಪಡಿಸಿದರು. ನಂತರ ನೀರು ಹರಿದು ಹೋಗಲು ತಡೆಯಾಗುತ್ತಿದ್ದ ಜಾಗಗಳನ್ನು ನೌಕಾನೆಲೆ ಅಧಿಕಾರಿಗಳಿಗೆ ತಿಳಿಸಲಾಯಿತು. ನೀರಿನ ಹರಿವಿಗೆ ಆಗಿರುವ ಅಡ್ಡಿಯನ್ನು ತೆರವುಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಸುರಿಯುತ್ತಿರುವ ಮಳೆಯ ನಡುವೆಯೇ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಅಲ್ಲದೇ ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರೊಂದಿಗೆ ಚರ್ಚಿಸಿ, ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.