Site icon Vistara News

Uttara Kannada News: ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕರಿಂದ ಡಿಸಿಗೆ ಮನವಿ

Former MLA Rupali Nayka appeals to DC to resolve various issues under Karwara Ankola Assembly Constituency

ಕಾರವಾರ: ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಹೆಚ್ಚಿನ ಪರಿಹಾರ ಹಾಗೂ ಮನೆ ಹಾನಿ ಪ್ರಕರಣದಲ್ಲಿ ಗಂಗಾವಳಿ ತೀರದ ನಿವಾಸಿಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಲು ಮುಂದಾಗಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್‌. ನಾಯ್ಕ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಅವರಿಗೆ (Uttara Kannada News) ಮನವಿ ಸಲ್ಲಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಅವರು ಮನವಿ ಮಾಡಿದರು.

ಇತ್ತೀಚೆಗೆ ಭಾರಿ ಮಳೆಯಿಂದ ಚೆಂಡಿಯಾ, ತೋಡೂರು, ಅಮದಳ್ಳಿ, ಅರಗಾ ಮತ್ತಿತರ ಕಡೆಗಳಲ್ಲಿ ಮನೆಗಳು ಜಲಾವೃತವಾಗುತ್ತಿವೆ. ಜನತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ನೌಕಾನೆಲೆಯ ನಿರ್ಮಾಣ ಕಾಮಗಾರಿಗಳಿಂದ ನೀರು ಸರಾಗವಾಗಿ ಸಮುದ್ರಕ್ಕೆ ಹರಿದು ಹೋಗದೇ, ಗುಡ್ಡ ಬೆಟ್ಟಗಳಿಂದ ಹರಿದು ಬರುವ ನೀರು ಮನೆಗಳಿಗೆ ನುಗ್ಗುತ್ತಿದೆ. ಆ ಪ್ರದೇಶದ ಜನತೆಯ ಬದುಕು ಅಸಹನೀಯವಾಗಿದೆ.

ಇದನ್ನೂ ಓದಿ: Pralhad Joshi: ಕೇಂದ್ರದ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ; 1.3 ಕೋಟಿ ಜನರಿಂದ ನೋಂದಣಿ

ಅಂಕೋಲಾ ತಾಲೂಕಿನ ಹಾರವಾಡ ಗೌಡಕೇರಿ, ಬೊಬ್ರುವಾಡದ ನದಿಭಾಗ್ ವ್ಯಾಪ್ತಿಯಲ್ಲಿ ಮಳೆನೀರು ನುಗ್ಗುತ್ತಿದ್ದು, ಅಲ್ಲಿನ ಜನತೆ ಪ್ರತಿವರ್ಷ ಇದೇ ಬವಣೆಯನ್ನು ಅನುಭವಿಸುತ್ತಿದ್ದಾರೆ. ನೌಕಾನೆಲೆ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಗುಡ್ಡ ಬೆಟ್ಟಗಳಿಂದ ಹರಿದುಬರುವ ನೀರು ಸರಾಗವಾಗಿ ಸಮುದ್ರಕ್ಕೆ ಹರಿದುಹೋಗುವಂತೆ ಶಾಶ್ವತ ಕ್ರಮ ಕೈಗೊಂಡು ಪ್ರತಿ ವರ್ಷ ಪ್ರವಾಹದ ಬವಣೆಯಿಂದ ಜನರನ್ನು ಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಪರ್ಯಾಯ ಮಾರ್ಗವಾಗಿ ಬಳಕೆಯಾಗುತ್ತಿರುವ ಅಗಸೂರು-ಶಿರಗುಂಜಿ-ಕೋಡ್ಸಣಿ ಮಾರ್ಗ ಹಾಗೂ ಹಿಲ್ಲೂರು-ಮಾದನಗೇರಿ ರಸ್ತೆಗಳನ್ನು ದುರಸ್ಥಿ ಮಾಡಬೇಕು. ಬೃಹತ್ ವಾಹನಗಳ ಓಡಾಟದಿಂದ ಈ ರಸ್ತೆಗಳು ಹದಗೆಟ್ಟಿವೆ. ದೊಡ್ಡ ದೊಡ್ಡ ಹೊಂಡಗಳು ಬಿದ್ದು, ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗುತ್ತಿದೆ. ಬೃಹತ್ ವಾಹನಗಳ ಓಡಾಟದಿಂದಲೇ ರಸ್ತೆ ಸಂಪೂರ್ಣ ಹಾಳಾಗಿವೆ. ಆದ ಕಾರಣ ಅಂಕೋಲಾ ತಾಲೂಕಿನ ಕೊಡ್ಸಣಿ ರಸ್ತೆ ಹಾಗೂ ಗೋಕರ್ಣ ವಡ್ಡಿ ರಸ್ತೆ, ಮಂಜಗುಣಿ ರಸ್ತೆಗಳನ್ನು ಪ್ರಕೃತಿ ವಿಕೋಪದಿಂದ ಹಾನಿಯಾದ ರಸ್ತೆ ಎಂದು ಪರಿಗಣಿಸಿ ಸರ್ವಋತು ರಸ್ತೆಯನ್ನಾಗಿ ಮಾಡಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.

ಇದನ್ನೂ ಓದಿ: MB Patil: ರಾಜ್ಯದಲ್ಲಿ ಟೊಯೋಟಾ ಕಂಪನಿಯ ಹೂಡಿಕೆ ಅಬಾಧಿತ; ಸಚಿವ ಎಂ‌.ಬಿ. ಪಾಟೀಲ

ಪರಿಹಾರವನ್ನು ಹೆಚ್ಚಿಸಿ

ಪ್ರವಾಹದಿಂದ ನೀರು ನುಗ್ಗಿದ ಮನೆಗಳಿಗೆ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 10 ಸಾವಿರ ಪರಿಹಾರ ನೀಡಲಾಗುತ್ತಿತ್ತು. ಈಗ ರಾಜ್ಯ ಸರ್ಕಾರ 5 ಸಾವಿರ ನೀಡುತ್ತಿದೆ. ಇದನ್ನು 10 ಸಾವಿರಕ್ಕೆ ಏರಿಸಬೇಕು. ಉಳುವರೆಯಲ್ಲಿ ಮನೆ ಹಾನಿಯಾಗಿದೆ, ಸಾವು ಸಂಭವಿಸಿದೆ. ಮನೆ ಕಳೆದುಕೊಂಡವರಿಗೆ ನಿವೇಶನ ಗುರುತಿಸಿ ಮನೆ ನಿರ್ಮಿಸಿ ಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Exit mobile version