Site icon Vistara News

Uttara Kannada News: ನಮ್ಮಲ್ಲಿರುವ ಕೌಶಲ್ಯಗಳನ್ನು ಅರಿತುಕೊಳ್ಳಬೇಕು; ಡಾ. ಆರ್.ಡಿ. ಜನಾರ್ಧನ

Beautician and Basic Fashion Designing Training Programme inauguration in Yallapura

ಯಲ್ಲಾಪುರ: ಇಂದಿನ ಶತಮಾನ ವಿದ್ಯಾರ್ಹತೆಯ ಶತಮಾನವಾಗಿದೆ. ವಿದ್ಯೆಯ ಮೂಲಕ ನಮ್ಮನ್ನು ಅಳೆಯಲಾಗುತ್ತದೆ. ನಮ್ಮಲ್ಲಿರುವ ಪ್ರತಿಭೆಗಳನ್ನು ಕೌಶಲ್ಯವಾಗಿ ಪರಿವರ್ತಿಸಿಕೊಂಡು ಉದ್ಯೋಗ ಸೃಷ್ಟಿಸಿಕೊಳ್ಳುವ ತರಬೇತಿಗಳ ಅವಶ್ಯಕತೆ ಇಂದಿನ ವಿದ್ಯಾರ್ಥಿಗಳಿಗೆ ಇದೆ ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಡಿ. ಜನಾರ್ಧನ (Uttara Kannada News) ತಿಳಿಸಿದರು.

ಪಟ್ಟಣದ ಅಡಿಕೆ ಭವನದಲ್ಲಿ ಸೋಮವಾರ ಗ್ರೀನ್ ಕೇರ್ ಸಂಸ್ಥೆ ಶಿರಸಿ ಹಾಗೂ ಕ್ರಿಯೇಟಿವ್ ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಬ್ಯೂಟೀಷಿಯನ್ ಹಾಗೂ ಬೇಸಿಕ್ ಫ್ಯಾಶನ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿರುವ ಕೌಶಲ್ಯಗಳನ್ನು ಅರಿತುಕೊಳ್ಳುವ ಅಗತ್ಯವಿದೆ. ನಮ್ಮಲ್ಲಿರುವ ಕಲೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜ್ಞಾನ ನಮಗೆ ತರಬೇತಿಗಳಿಂದ ಮಾತ್ರ ದೊರೆಯುತ್ತದೆ. ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಜ್ಞಾನ, ಅದೇ ತಂತ್ರಜ್ನಾನದ ಬದಲಾವಣೆಗೆ ಪ್ರಯತ್ನಿಸುವುದು ಆವಿಷ್ಕಾರ. ಅಂತಹ ಆವಿಷ್ಕಾರಗಳನ್ನು ಮಾಡುವ ನಿಟ್ಟಿನಲ್ಲಿ ನಮ್ಮ ಯೋಚನೆಯಿರಬೇಕು ಎಂದರು.

ಇದನ್ನೂ ಓದಿ: Kannada New Movie: ಗಣೇಶ್ ಅಭಿನಯದ ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ʼದ್ವಾಪರ ದಾಟುತʼ ಹಾಡು ರಿಲೀಸ್‌!

ತರಬೇತಿಗಳ ಮೂಲಕ ಯಾವುದೇ ವಸ್ತು, ಕಲೆ ಅಥವಾ ಕೌಶಲ್ಯವನ್ನು ಸಮರ್ಪಕವಾಗಿ ಉಪಯೋಗಕ್ಕೆ ಬರುವಂತೆ ವಿದ್ಯಾರ್ಥಿಗಳು ಕಲಿಯಬೇಕು. ಪ್ರತಿನಿತ್ಯ ಹೊಸತನಗಳು ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಕಾಣಸಿಗುತ್ತದೆ. ಅದಕ್ಕೆ ಹೊಂದಿಕೊಳ್ಳುವ, ಅರಿತುಕೊಳ್ಳುವ ಜ್ಞಾನವನ್ನು ನಾವೆಲ್ಲ ಪಡೆಯಬೇಕಿದೆ. ಇದೇ ರೀತಿಯ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನಮ್ಮ ಕಾಲೇಜಿನಲ್ಲೂ ಹಮ್ಮಿಕೊಳ್ಳುವ ಆಸಕ್ತಿ ನಮಗೆ ಇದೆ. ಆ ಮೂಲಕ ವಿದ್ಯಾರ್ಥಿಗಳು ಸ್ವಾವಲಂಬಿ ಜೀವನವನ್ನು ಕಂಡುಕೊಳ್ಳಲು ನಮ್ಮಲ್ಲಾದ ಸಹಕಾರವನ್ನು ನೀಡಬಹುದಾಗಿದೆ. ಇಂದು ಉದ್ಯೋಗ ಅರಸಿ ದೊಡ್ಡ ದೊಡ್ಡ ಊರುಗಳಿಗೆ ತೆರಳುವ ಬದಲು, ನಮ್ಮಲ್ಲಿಯೇ ಉದ್ಯೋಗ ಸೃಷ್ಟಿಗೆ ನಾವೆಲ್ಲ ಪ್ರಯತ್ನಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಗ್ರೀನ್ ಕೇರ್ ಸಂಸ್ಥೆ ನಿರ್ದೇಶಕ ಪ್ರಶಾಂತ ಮುಳೆ ಮಾತನಾಡಿ, ನಮ್ಮ ಸಂಸ್ಥೆಯಿಂದ ಸ್ವಾವಲಂಬಿ ಜೀವನ ನೀಡುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದೆ. ಅದರಿಂದ ನೀವು ಜನರಿಗೆ ನಗುಮೊಗದಲ್ಲಿ ಸೇವೆ ಸಲ್ಲಿಸಿ, ಸಂತೃಪ್ತ ಜೀವನ ಕಂಡುಕೊಳ್ಳುವಂತಾಗಲಿ ಎಂದರು.

ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿದ್ಯಾರ್ಹತೆಯ ಜೊತೆಗೆ ಕೌಶಲ್ಯದ ಅವಶ್ಯಕತೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗ ಆಧಾರಿತ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಭಟ್ ಆನಗೋಡ, ಪ.ಪಂ. ಸಮುದಾಯ ಸಂಘಟಣಾಧಿಕಾರಿ ಹೇಮಾವತಿ ಭಟ್ಟ, ಅಸ್ಮಿತೆ ಫೌಂಡೇಶನ್ ಸಿ. ಇ. ಓ ರಿಯಾಜ್ ಸಾಗರ್ ಮಾತನಾಡಿದರು. ಇದೇ ಸಂದರ್ಭದಲ್ಲಿ 20 ಬ್ಯೂಟಿಷಿಯನ್ ಹಾಗೂ 20 ಫ್ಯಾಶನ್ ಡಿಸೈನಿಂಗ್ ತರಬೇತಿಯ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು.

ಇದನ್ನೂ ಓದಿ: Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ವೇದಿಕೆಯಲ್ಲಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ, ಉದ್ಯಮಿ ಸದಾಶಿವ ಶಿವಯ್ಯನಮಠ, ಗಜಾನನ ಭಟ್, ಸಂಕಲ್ಪ ಟ್ರಸ್ಟ್‌ ಅಧ್ಯಕ್ಷ ಕುಮಾರ ಪಟಗಾರ ಉಪಸ್ಥಿತರಿದ್ದರು. ಸ್ವಾತಿ ಪ್ರಾರ್ಥಿಸಿದರು. ಕ್ರಿಯೇಟಿವ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಮಾಲಿಕ ಶ್ರೀನಿವಾಸ್ ಮುರ್ಡೇಶ್ವರ ಸ್ವಾಗತಿಸಿದರು. ಲೈಫ್ ಲೈನ್ ಲ್ಯಾಬ್ ಮಾಲಕಿ ಆಶಾ ಡಿಸೋಜ ನಿರೂಪಿಸಿದರು. ಗ್ರೀನ್ ಕೇರ್ ಸಂಸ್ಥೆ ಉಪಾಧ್ಯಕ್ಷೆ ರೋಹಿಣಿ ಸೈಲ್ ವಂದಿಸಿದರು.

Exit mobile version