Site icon Vistara News

Uttara Kannada News: ಪಶುಗಳ ಚಿಕಿತ್ಸೆಗೆ ಮನೆ ಬಾಗಿಲಿಗೆ ಬರಲಿದೆ ಉಚಿತ ಸಂಚಾರಿ ಪಶು ಚಿಕಿತ್ಸಾ ವಾಹನ

Free mobile veterinary vehicle service in Uttara Kannada district

ಕಾರವಾರ: ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಉತ್ತರ ಕನ್ನಡ ಜಿಲ್ಲೆಗೆ (Uttara Kannada News) 13 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆ (Free Mobile Veterinary Vehicle Service) ಆರಂಭಗೊಂಡಿದ್ದು, ರೈತರು ಮತ್ತು ಜಾನುವಾರು ಮಾಲೀಕರು ಉಚಿತ ಟೋಲ್ ಫ್ರೀ ಸಂಖ್ಯೆ 1962 ಗೆ ಕರೆ ಮಾಡುವ ಮೂಲಕ ಉಚಿತವಾಗಿ ಈ ಸೇವೆಯನ್ನು ಪಡೆಯಬಹುದಾಗಿದೆ.

ಗುಡ್ಡಗಾಡು ಪ್ರದೇಶಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪಶುಗಳಿಗೆ ರೋಗ ಬಂದರೆ ಸಕಾಲದಲ್ಲಿ ಅವುಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲು ಮತ್ತು ದೂರದ ಪಶು ಆಸ್ಪತ್ರೆಗಳಿಗೆ ಕರೆದೊಯ್ಯುವುದು ಅತ್ಯಂತ ತ್ರಾಸದ ಕೆಲಸ. ಇದನ್ನು ತಪ್ಪಿಸುವ ಸಲುವಾಗಿಯೇ ರೋಗಗ್ರಸ್ಥ ಪಶುಗಳು ಇರುವ ಸ್ಥಳಕ್ಕೆ ಆಗಮಿಸಿ ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಜಾರಿಗೆ ಬಂದಿರುವ ಉಚಿತ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭಿಸಲಾಗಿದೆ.

ರೋಗಗ್ರಸ್ಥ ಜಾನುವಾರುಗಳ ಮಾಲೀಕರು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಸಹಾಯವಾಣಿ ಸಂಖ್ಯೆ 1962ಗೆ ಮಾಡಿ, ತಮ್ಮ ಹೆಸರು, ವಿಳಾಸ ಹಾಗೂ ಜಾನುವಾರುಗಳಿಗೆ ಇರುವ ತೊಂದರೆ ಬಗ್ಗೆ ತಿಳಿಸಿದ ನಂತರ ಸಮೀಪದ ಸಂಚಾರಿ ಪಶು ಚಿಕಿತ್ಸಾ ವಾಹನಕ್ಕೆ ಈ ಬಗ್ಗೆ ಮಾಹಿತಿ ರವಾನೆಯಾಗಿ, ಪಶುವೈದ್ಯರು, ಪಶು ವೈದ್ಯ ಸಹಾಯಕರು ಸದರಿ ವಿಳಾಸಕ್ಕೆ ಆಗಮಿಸಿ ಪಶುಗಳಿಗೆ ಉಚಿತ ಚಿಕಿತ್ಸೆ ಹಾಗೂ ಅಗತ್ಯ ಔಷಧಗಳನ್ನು ನೀಡಲಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಪ್ರತಿ ತಾಲೂಕಿಗೆ ಒಂದರಂತೆ 12 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಮತ್ತು ಯಲ್ಲಾಪುರದಲ್ಲಿರುವ ಪಶು ವೈದ್ಯಕಿಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್‌ಗೆ ಒಂದು ವಾಹನ ಸೇರಿದಂತೆ ಒಟ್ಟು 13 ವಾಹನಗಳಲ್ಲಿ 9 ಪಶುವೈದ್ಯರು ಮತ್ತು 13 ಪಶು ವೈದ್ಯ ಸಹಾಯಕರು ಹಾಗೂ ವಾಹನ ಚಾಲಕರು ಈ ಯೋಜನೆಯಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: Karnataka Weather : ಬೆಳಗಾವಿಯಲ್ಲಿ ಕನಿಷ್ಠ ಉಷ್ಣಾಂಶ ದಾಖಲು; ನಾಳೆ ಹೇಗಿರಲಿದೆ ವಾತಾವರಣ

ಸಾರ್ವಜನಿಕರು ತಮ್ಮ ತುರ್ತು ಅರೋಗ್ಯ ಸಹಾಯ ಉಚಿತ ಸಹಾಯವಾಣಿ 108 ಗೆ ಕರೆ ಮಾಡಿದಾಗ ಸ್ಪಂದಿಸುವ ರೀತಿಯಲ್ಲಿಯೇ 1962 ಸಹಾಯವಾಣಿ ಪಶುಗಳ ಆರೋಗ್ಯ ಸಹಾಯಕ್ಕೆ ಸ್ಪಂದಿಸಲಿದ್ದು, ಪಶುವೈದ್ಯರು ಸ್ಥಳಕ್ಕೆ ಬಂದು ಉಚಿತ ಚಿಕಿತ್ಸೆ ಹಾಗೂ ಅಗತ್ಯ ಔಷಧಗಳನ್ನು ನೀಡಲಿದ್ದು, ಜಿಲ್ಲೆಯಲ್ಲಿ ಈ ಸೇವೆಯನ್ನು ಒದಗಿಸಲು ಎಡುಸ್ಪಾರ್ಕ್ ಇಂಟರ್ ನ್ಯಾಷನಲ್ ಪ್ರೈ.ಲಿ ಎಂಬ ಸಂಸ್ಥೆಯು ಇದರ ಉಸ್ತುವಾರಿ ವಹಿಸಿಕೊಂಡಿದ್ದು, ವಾಹನಗಳು, ವೈದ್ಯರು ಮತ್ತು ಎಲ್ಲಾ ಅಗತ್ಯ ಸಿಬ್ಬಂದಿ ಈ ಸಂಸ್ಥೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಶುಪಾಲನಾ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ 4.10 ಲಕ್ಷ ಹಸು, ಎಮ್ಮೆ,ಇತರೆ ಜಾನುವಾರುಗಳಿದ್ದು, 19,000 ಕುರಿ ಮೇಕೆಗಳು, 75,000 ನಾಯಿಗಳಿದ್ದು ಸಾಕಷ್ಟು ಸಂಖ್ಯೆಯ ಇತರೆ ಸಾಕು ಪ್ರಾಣಿಗಳಿವೆ. ಪ್ರಸ್ತುತ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸೇವೆ ಪಡೆಯಲು ಉಚಿತ ಸಹಾಯವಾಣಿ 1962 ಸಂಖ್ಯೆಗೆ ತಿಂಗಳಿಗೆ 400 ರಿಂದ 425 ಕರೆಗಳು ಬರುತ್ತಿದ್ದು, ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು, ವೈದ್ಯರು ಮತ್ತು ಸಹಾಯಕರ ಸೇವೆ ಲಭ್ಯವಿರುವುದರಿಂದ ಜಾನುವಾರು ಮಾಲೀಕರು ಈ ಸೇವೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Job Alert: ಎನ್‌ಎಚ್‌ಐಡಿಸಿಎಲ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಹೊಂದಿದವರು ಅರ್ಜಿ ಸಲ್ಲಿಸಿ

ಈ ಸೇವೆಯು ಪ್ರಸ್ತುತ ಬೆಳಗ್ಗೆ 9 ರಿಂದ 5 ವರೆಗೆ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇದು 24×7 ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಜಿಲ್ಲೆಯ ರೈತರು ಮತ್ತು ಜಾನುವಾರುಗಳ ಮಾಲೀಕರು 1962 ಗೆ ಕರೆ ಮಾಡುವ ಮೂಲಕ ಈ ಸೇವೆ ಪಡೆಯಬಹುದಾಗಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾನುವಾರುಗಳಿಗೆ ವಿಮಾ ಸೌಲಭ್ಯ ಜನವರಿ 2024 ರಿಂದ ಆರಂಭಗೊಂಡಿದ್ದು ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೆಶಕ ಮೋಹನ್‌ಕುಮಾರ್ ಮನವಿ ಮಾಡಿದ್ದಾರೆ.

Exit mobile version