Site icon Vistara News

Uttara Kannada News: ಮತಗಟ್ಟೆ ಸಿಬ್ಬಂದಿಗೆ ತಾಜಾ, ಸ್ವಾದಿಷ್ಟ ಭರಿತ ಆಹಾರ: ಡಿಸಿ ಮಾನಕರ್‌

Uttara Kannada DC Gangubai Manakar meeting about lok sabha election

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ (Lok Sabha Election) ಸಂಬಂಧಿಸಿದಂತೆ, ಮತದಾನ ಪ್ರಯುಕ್ತ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗೆ ತಾಜಾತನದಿಂದ ಕೂಡಿದ ಮತ್ತು ಸ್ವಾದಿಷ್ಟ ಭರಿತ ಆಹಾರ ಸಿದ್ಧಪಡಿಸಿ, ವಿತರಿಸುವಂತೆ ಜಿಲ್ಲಾ ಅಕ್ಷರ ದಾಸೋಹ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಸೂಚನೆ (Uttara Kannada News) ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೆಶಕರುಗಳು ಮತ್ತು ಮಧ್ಯಾಹ್ನದ ಉಪಹಾರ ಯೋಜನೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾನದ ಹಿಂದಿನ ದಿನ ಮಸ್ಟರಿಂಗ್ ಕೇಂದ್ರದಲ್ಲಿಯೇ ಎಲ್ಲಾ ಸಿಬ್ಬಂದಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗುವುದು. ನಂತರ ಮತದಾನದ ಪರಿಕರಗಳೊಂದಿಗೆ ಮತಗಟ್ಟೆಗೆ ಆಗಮಿಸುವ ಸಿಬ್ಬಂದಿಗೆ ಸಂಜೆ ಚಹಾ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಿದ ಅವರು, ರಾತ್ರಿಯ ಭೋಜನ, ಮರುದಿನ ಬೆಳಗ್ಗೆ ಉಪಾಹಾರ ಮತ್ತು ಮಧ್ಯಾಹ್ನದ ಭೋಜನವನ್ನು ಅತ್ಯಂತ ರುಚಿಕರವಾಗಿ ಮತ್ತು ತಾಜಾತನದಿಂದ ಕೂಡಿದ ತರಕಾರಿ ಮತ್ತು ಉತ್ತಮ ಗುಣಮಟ್ಟದ ದಿನಸಿ ಪದಾರ್ಥಗಳನ್ನು ಬಳಸಿ ಸಿದ್ದಪಡಿಸಬೇಕು. ಮಧ್ಯಾಹ್ನ ಸಿಬ್ಬಂದಿಗಳಿಗೆ ಮಜ್ಜಿಗೆಯನ್ನು ನೀಡುವ ವ್ಯವಸ್ಥೆ ಮಾಡಬೇಕು. ಊಟ ಮತ್ತು ಉಪಹಾರದ ಕುರಿತಂತೆ ಯಾವುದೇ ಸಿಬ್ಬಂದಿಗಳಿಂದ ದೂರುಗಳು ಬಾರದಂತೆ ಉತ್ತಮ ರೀತಿಯಲ್ಲಿ, ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯುತವಾಗಿ ತಮಗೆ ವಹಿಸಲಾದ ಕರ್ತವ್ಯವನ್ನು ನಿರ್ವಹಿಸುವಂತೆ ನಿರ್ದೇಶನ ನೀಡಿದರು.

ಇದನ್ನೂ ಓದಿ: Koppala News: ಕಡೇಬಾಗಿಲು ಗ್ರಾಮದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

ಮತಗಟ್ಟೆ ಸಿಬ್ಬಂದಿಗಳಿಗೆ ಆಹಾರ ತಯಾರಿಕೆಗೆ ಅಗತ್ಯವಿರುವ ಅನುದಾನವನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಲಾಗುವುದು. ಬಿಸಿಯೂಟ ಸಿದ್ದಪಡಿಸುವ ಕೋಣೆಗಳು ಇಲ್ಲದೇ ಇರುವ ಮತಗಟ್ಟೆಗಳಲ್ಲಿ, ಅಗತ್ಯ ವ್ಯವಸ್ಥೆ ಇರುವ ಸ್ಥಳದಲ್ಲಿ ಆಹಾರ ಸಿದ್ಧಪಡಿಸಿ ಮತಗಟ್ಟೆಗೆ ಸರಬರಾಜು ಮಾಡಲಾಗುವುದು ಹಾಗೂ ಇದಕ್ಕಾಗಿ ಸೂಕ್ತ ವಾಹನ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದರು.

ಮತಗಟ್ಟೆಗಳಲ್ಲಿ ಸಿದ್ಧಪಡಿಸಿದ ಆಹಾರದ ಗುಣಮಟ್ಟದ ಬಗ್ಗೆ ಸ್ವತಃ ತಾವೇ ಬಂದು ಪರಿಶೀಲಿಸುವುದಾಗಿ ತಿಳಿಸಿದ ಡಿಸಿ, ಉಪಹಾರ ಸಿದ್ದಪಡಿಸುವ ಮುನ್ನ ಸಿಬ್ಬಂದಿಗಳು ಯಾವುದಾದರೂ ಬೇರೆ ಆಯ್ಕೆ ತಿಳಿಸಿದರೆ ಅವರ ಇಚ್ಛೆಯ ಉಪಹಾರವನ್ನು ಸಿದ್ದಪಡಿಸಿ ನೀಡುವಂತೆ ತಿಳಿಸಿದರು.

ಇದನ್ನೂ ಓದಿ: Uttara Kannada News: ಜಲ ಸಾರಿಗೆಯಿಂದ ಆರ್ಥಿಕ ಶಕ್ತಿ ಸದೃಢ: ಜಯರಾಮ್ ರಾಯಪುರ

ಆಹಾರ ತಯಾರಿಕೆಗೆ ಬಿಸಿಯೂಟ ಸಿದ್ದಪಡಿಸುವ ಅಡುಗೆ ಸಿಬ್ಬಂದಿಯವರನ್ನು ಬಳಸಿಕೊಳ್ಳಬೇಕು. ಅಡುಗೆ ತಯಾರಿಸುವವರ ಕರ್ತವ್ಯ ನಿರ್ವಹಣೆಗೆ ಗೌರವಧನ ಬಿಡುಗಡೆ ಮಾಡುವ ಕುರಿತಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು ಎಂದರು.

ಆಹಾರ ತಯಾರಿಕೆಯ ಸಿಬ್ಬಂದಿ, ಮತಗಟ್ಟೆಗೆ ಸಾಕಷ್ಟು ಮುಂಚಿತವಾಗಿ ತೆರಳಿ, ಅಡುಗೆ ಕೋಣೆಗಳಲ್ಲಿ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು ಮತ್ತು ಅಡುಗೆ ತಯಾರಿಕೆಗೆ ಬಳಸುವ ಅಗತ್ಯವಿರುವ ಎಲ್ಲಾ ಪರಿಕರಗಳು ಲಭ್ಯವಿರುವ ಬಗ್ಗೆ ಹಾಗು ಅವುಗಳನ್ನು ಸ್ವಚ್ಛಪಡಿಸಿಟ್ಟುಕೊಳ್ಳುವಂತೆ ತಿಳಿಸಿದರು.

ಇದನ್ನೂ ಓದಿ: Cow Milk‌ For Baby: ಶಿಶುಗಳಿಗೆ ಯಾವಾಗಿನಿಂದ ಹಸುವಿನ ಹಾಲು ನೀಡಬಹುದು?

ಮತದಾನ ಕರ್ತವ್ಯ ನಿರ್ವಹಿಸಿ ಡಿಮಸ್ಟರಿಂಗ್ ಕೇಂದ್ರಗಳಿಗೆ ಬರುವ ಸಿಬ್ಬಂದಿಗೆ ಆಯಾ ಮಸ್ಟರಿಂಗ್ ಕೇಂದ್ರದಲ್ಲಿಯೇ ರಾತ್ರಿಯ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಡಿಮಸ್ಟರಿಂಗ್ ನಂತರ ಎಲ್ಲಾ ಸಿಬ್ಬಂದಿಗೆ ಅವರ ಕೇಂದ್ರಸ್ಥಾನಗಳಿಗೆ ತೆರಳಲು ಸೂಕ್ತ ವಾಹನ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಅಕ್ಷರ ದಾಸೋಹ ಮತ್ತು ಮಧ್ಯಾಹ್ನದ ಉಪಹಾರ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version