ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ (Gandhi Jayanti) ಹಾಗೂ ಜಿಪಂ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸ್ವಚ್ಛತೆಯ ಕುರಿತು ಪ್ರತಿಜ್ಞಾವಿಧಿ ಭೋದಿಸಿದರು. ಬಳಿಕ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ತತ್ವದಡಿ ಅವಿರತವಾಗಿ ಶ್ರಮಿಸಿ ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾನ್ ಚೇತನ ಮಹಾತ್ಮ ಗಾಂಧೀಜಿ ಅವರು ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದರು.
ಗಾಂಧೀಜಿ ಅವರ ಚಿಂತನೆ, ತತ್ವ, ಆದರ್ಶಗಳಡಿ ಸ್ಥಾಪಿತವಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಸರ್ಕಾರದ ಜನಪರ ಯೋಜನೆ, ಕಾರ್ಯಕ್ರಮಗಳ ಬಗೆಗೆ ಹೆಚ್ಚೆಚ್ಚು ಅರ್ಥ ಮಾಡಿಕೊಂಡರೆ ಮಾತ್ರ ಸಾಮಾನ್ಯ ಜನರಿಗೆ ಸಮರ್ಪಕವಾಗಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬಹುದಾಗಿದೆ.
ಜತೆಗೆ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದಲ್ಲಿ ಸ್ವಚ್ಚತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಎಲ್ಲರೂ ತಮ್ಮ ಸುತ್ತ-ಮುತ್ತಲಿನ ಪ್ರದೇಶವನ್ನು ಪ್ರತಿದಿನ ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು. ಹಾಗೇ ಇಂದು ದೇಶದ ಮಾಜಿ ಪ್ರಧಾನಿಗಳಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಆಗಿದ್ದು, ಇಂತಹ ಮಹನಿಯರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Highway Road : ಹೈವೇನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಹುಷಾರ್; ಇನ್ಮುಂದೆ ವಿಡಿಯೊದಲ್ಲಿ ಸಿಕ್ಕಿಬಿಳ್ತಿರಿ!
ನಂತರದಲ್ಲಿ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ಸ್ವತಃ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಕೈಗೆ ಗ್ಲೌಸ್ ಧರಿಸಿ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು. ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಪಂ ಆವರಣದಲ್ಲಿನ ಪ್ಲಾಸ್ಟಿಕ್ ಹಾಗೂ ಒಣ ಕಸ ಆರಿಸುವ ಮತ್ತು ಗುಡಿಸುವ ಮೂಲಕ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ಮುಖ್ಯ ಯೋಜನಾಧಿಕಾರಿ ವಿನೋದ್ ಅಣ್ವೇಕರ್, ಯೋಜನಾ ನಿರ್ದೇಶಕರು(ಡಿಆರ್‌ಡಿಎ) ಕರೀಂ ಅಸಾದಿ, ಲೆಕ್ಕಾಧಿಕಾರಿ ಹಬೀಬ್, ಸಹಾಯಕ ಉಪ ಕಾರ್ಯದರ್ಶಿಗಳಾದ ಸುನೀಲ ನಾಯ್ಕ, ಜೆ.ಆರ್.ಭಟ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಗೃಹ ರಕ್ಷಕ ಜಿಲ್ಲಾ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ
ಉತ್ತರಕನ್ನಡ ಜಿಲ್ಲಾ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರ ಕಾರ್ಯಾಲಯದಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಪ್ರಯುಕ್ತ ಕಚೇರಿ ಆವರಣ ಹಾಗೂ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಮಾಡಲಾಯಿತು. ಈ ದಿನದ ನೆನಪಿಗಾಗಿ ಹೋಂ ಗಾರ್ಡ್ ಕಮಾಂಡೆಂಟ್ ಡಾ.ಸಂಜು ನಾಯಕ ತೆಂಗಿನ ಸಸಿ ನೆಟ್ಟು ನೀರುಣಿಸಿದರು.
ಇದನ್ನೂ ಓದಿ: Karnataka Weather Forecast : ನಾಳೆ ದಕ್ಷಿಣದಲ್ಲಿ ದುರ್ಬಲ; ಉತ್ತರ, ಕರಾವಳಿಯಲ್ಲಿ ಸಾಮಾನ್ಯ ಮಳೆ
ನಂತರ ಸಭಾ ಕಾಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಾದೇಷ್ಟರಾದ ಡಾ.ಸಂಜು ಟಿ ನಾಯಕ ಅವರು ಗಾಂಧೀಜಿಯವರ ಆದರ್ಶಗಳನ್ನು ಸ್ಮರಿಸುವುದರೊಂದಿಗೆ ಸ್ವಚ್ಛತೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಕಾರವಾರ ಗೃಹರಕ್ಷಕ ದಳದ ಘಟಕಾಧಿಕಾರಿಗಳು, ಗೃಹರಕ್ಷಕರು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.