Site icon Vistara News

Uttara Kannada News: ಮಠಕ್ಕೆ ಗುರು ಎಷ್ಟು ಮುಖ್ಯವೋ ಸಮಾಜಕ್ಕೆ ಗುರಿಕ್ಕಾರರು ಅಷ್ಟೇ ಮುಖ್ಯ: ಶ್ರೀರಾಘವೇಶ್ವರಭಾರತೀ ಸ್ವಾಮೀಜಿ

Sri Raghaveshvarabharati Swamiji pravachan

ಗೋಕರ್ಣ: ಮಠದಲ್ಲಿ ಗುರುಗಳು ಹೇಗೆ ಮುಖ್ಯವೋ ಸಮಾಜದಲ್ಲಿ ಗುರಿಕ್ಕಾರರು ಅಷ್ಟೇ ಮುಖ್ಯ. ಗುರಿಕ್ಕಾರರು ಇಡೀ ಸಮಾಜ (Society) ವ್ಯವಸ್ಥೆಯ ಬೆನ್ನೆಲುಬು (Backbone) ಎಂದು ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ತಿಳಿಸಿದರು.

ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಚಾತುರ್ಮಾಸ್ಯ ಅಂಗವಾಗಿ ಆಯೋಜಿಸಿದ್ದ ಗುರಿಕ್ಕಾರರ ಬೃಹತ್ ಸಮಾವೇಶದಲ್ಲಿ ಶ್ರೀಸಂದೇಶ ನೀಡಿದ ಶ್ರೀಗಳು, “ರಾಮನಿಗೆ ಮುಖ್ಯಪ್ರಾಣನ ಸೇವೆ ಹೇಗೆ ಸಂದಿದೆಯೋ ಗುರಿಕ್ಕಾರರು ಸಮಾಜಕ್ಕೆ ಅಂಥ ಸೇವೆ ಸಲ್ಲಿಸಬೇಕು. ಆ ಸ್ಥಾನ ನೀಡುವ ಗೌರವ ದೊಡ್ಡದು. ಗುರಿಕ್ಕಾರ ಗೌರವದ ಜತೆಗೆ ಹಲವು ಜವಾಬ್ದಾರಿಗಳೂ ಹೆಗಲಿಗೇರುತ್ತವೆ” ಎಂದು ಕಿವಿಮಾತು ಹೇಳಿದರು.

ಸಮಾಜದಲ್ಲಿ ನಿಮಗಿಂತ ಶ್ರೀಮಂತರು ಅಥವಾ ಪ್ರಭಾವಿಗಳು ಇರಬಹುದು. ಆದರೆ ಸಮಾಜದಲ್ಲಿ ಗುರುಪೀಠ ಮಾತ್ರ ನಿಮಗಿಂತ ದೊಡ್ಡದು. ಇಡೀ ಸಮಾಜದ ಭಾವ ಗಮನಿಸಿ ಗುರುಪೀಠ ನಿಮ್ಮನ್ನು ನೇಮಕ ಮಾಡಿದೆ. ಇಡೀ ಪೀಠದ ಶಕ್ತಿ ನಿಮ್ಮ ಹಿಂದಿರುತ್ತದೆ. ಸಮಾಜಸೇವೆಗಾಗಿ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಎಂದು ಕರೆ ನೀಡಿದರು.

ಸಮಾಜ ನೀಡುವ ಗೌರವಕ್ಕೆ ತಕ್ಕಂತೆ ನೀವು ಕೂಡಾ ಜವಾಬ್ದಾರಿಯುತವಾಗಿ ಕೆಲಸ ಮಾಡಿ, ಆ ಗೌರವ ಉಳಿಸಿಕೊಳ್ಳಬೇಕು. ಗುರುಗಳ, ಶ್ರೀರಾಮನ, ಸಮಾಜದ ಪ್ರತಿನಿಧಿಗಳು ನೀವು. ಇಡೀ ಶಿಷ್ಯಸಮಾಜದ ಅಭಿವ್ಯಕ್ತಿ ನೀವು. ಸಮಾಜದ ಎಲ್ಲರನ್ನೂ ಮಮತೆಯಿಂದ ಕಾಣಬೇಕು, ಕಾಳಜಿ ವಹಿಸಬೇಕು. ದಾರಿ ತಪ್ಪಿದರೆ ಎಚ್ಚರಿಸಿ ಅವರನ್ನು ಸರಿದಾರಿಗೆ ತರುವ ಕರ್ತವ್ಯ ನಿಮ್ಮದು ಎಂದು ಸೂಚಿಸಿದರು.

ಇದನ್ನೂ ಓದಿ: Indian Coast Guard: 290 ನಾವಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅಪ್ಲೈ ದಿನಾಂಕ ವಿಸ್ತರಣೆ

ಸಂಘಟನೆಯನ್ನು ತಳಮಟ್ಟದಿಂದ ಬೆಳೆಸುವಲ್ಲಿ ನಿಮ್ಮ ಪಾತ್ರ ಅತ್ಯಂತ ದೊಡ್ಡದು. ಭಾವ ರಾಮಾಯಣದ ಮೂಲಕ ಗುರುಭಾವವನ್ನು ಪ್ರತಿಯೊಬ್ಬ ಶಿಷ್ಯರ ಮನೆಗೆ ತಲುಪಿಸುವ ರಾಯಭಾರಿಗಳು ನೀವು. ಸಮಾಜವನ್ನು ಸನ್ಮಾರ್ಗಕ್ಕೆ ಒಯ್ಯುವ ದೊಡ್ಡ ಅಭಿಯಾನ ನಿಮ್ಮಿಂದ ಆಗುತ್ತಿದೆ. ಇದು ಜ್ಞಾನ ಜಾಗರಣ. ನೀವು ಸಮಾಜದ ನೇತಾರರಾಗಿ ನಿಂತು ಬೇರು ಮಟ್ಟದಲ್ಲಿ ಸಂಘಟನೆಯನ್ನು ಬೆಳೆಸಬೇಕು ಎಂದು ಸಲಹೆ ಮಾಡಿದರು.

ಶ್ರೀರಾಮ ತನ್ನ ಸೇವೆ ಮಾಡಿದ ಕಪಿಸೇನೆಯನ್ನು ಕಾಪಾಡಿದಂತೆ ಶ್ರೀಸಂಸ್ಥಾನದವರ ಸಾಕ್ಷಾತ್ ಪ್ರತಿನಿಧಿಗಳಾದ ನಿಮ್ಮನ್ನು ಶ್ರೀಪೀಠ ರಕ್ಷಿಸುತ್ತದೆ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ನೀವು ಸಲ್ಲಿಸುತ್ತಿರುವ ಸೇವೆ ಅಮೂಲ್ಯ. ನಮ್ಮ ಸಂಘಟನೆ, ಶಿಸ್ತು, ಬದ್ಧತೆ, ಇಡೀ ಜಗತ್ತಿಗೆ ಮಾದರಿ. ಇದನ್ನು ಮತ್ತಷ್ಟು ಬಲಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀಮಠದ ಧರ್ಮಕರ್ಮ ವಿಭಾಗ ಸಿದ್ಧಪಡಿಸಿ, ಭಾರತಿ ಪ್ರಕಾಶನ ಹೊರತಂದ ಗುರಿಕ್ಕಾರರ ಗುರುಮಾರ್ಗ ಕೈಪಿಡಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.

ಇದನ್ನೂ ಓದಿ: Ganesh Chaturthi: 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್‌ ಕಂಪೆನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ

ಮುಳ್ಳೇರಿಯಾ ಮಂಡಲ ಪ್ರಧಾನ ಗುರಿಕ್ಕಾರ ಎಂ.ಜಿ.ಸತ್ಯನಾರಾಯಣ ಅವರು ಕೃತಿ ಬಗ್ಗೆ ಮಾತನಾಡಿದರು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಹವ್ಯಕ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮೂಲೆ, ಮಂಡಲ ಪ್ರಧಾನ ಗುರಿಕ್ಕಾರರಾದ ಉದಯ ಕುಮಾರ್ ಖಂಡಿಗ, ಲಕ್ಷ್ಮೀನಾರಾಯಣ ಕೌಲಕೈ, ಸುಬ್ರಹ್ಮಣ್ಯ ಚಿಪ್ಲಿ, ಕೆ.ಎಸ್.ಮಂಜುನಾಥ ಭಟ್ಟ ಕೌಲಮನೆ, ಶಂಭು ಎಸ್.ಭಟ್ ಕಡತೋಕ, ಬಾಲ್ಯ ಶಂಕರನಾರಾಯಣ ಭಟ್, ಪ್ರಕಾಶ ಮಳಲಗದ್ದೆ, ಜೆಡ್ಡು ರಾಮಚಂದ್ರ ಭಟ್, ಮಹಾಮಂಡಲದ ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಪದಾಧಿಕಾರಿಗಳಾದ ಹೇರಂಬ ಶಾಸ್ತ್ರಿ, ಗಣೇಶ್ ಜೋಶಿ, ಕೇಶವಪ್ರಕಾಶ್ ಎಂ, ಗೀತಾ ಮಂಜಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.

ಶ್ರೀಮಠದ ಇತಿಹಾಸ, ಪರಂಪರೆ ಮಹತ್ವ ಹಾಗೂ ಗುರಿಕ್ಕಾರರ ಕರ್ತವ್ಯಗಳ ಬಗ್ಗೆ ವಿದ್ವಾನ್ ಸತ್ಯನಾರಾಯಣ ಶರ್ಮಾ ಮಾತನಾಡಿದರು. ಗುರಿಕ್ಕಾರರ ಸಮಾವೇಶದ ಅಂಗವಾಗಿ ಡಾ.ಗೌತಮ್ ಅವರಿಂದ ದಾನ ಧಾರಾ ಪ್ರಸ್ತುತಿ ನಡೆಯಿತು. ಶ್ರೀಸಂಸ್ಥಾನದವರು ಅನುಗ್ರಹಿಸುವ ಭಾವರಾಮಾಯಣದ ಎಂಟನೇ ಸಂಚಿಕೆಯನ್ನು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಲೋಕಾರ್ಪಣೆ ಮಾಡಿದರು. ಆರ್.ಎಸ್.ಹೆಗಡೆಯವರ ಆಯತನ ಕೃತಿಯ ಎರಡನೇ ಭಾಗವನ್ನು ಇದೇ ಸಂದರ್ಭದಲ್ಲಿ ಶ್ರೀಗಳು ಲೋಕಾರ್ಪಣೆ ಮಾಡಿದರು.

ಇದನ್ನೂ ಓದಿ: Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಮಂದಿ ಗುರಿಕ್ಕಾರರು, ಶ್ರೀಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಗುರಿಕ್ಕಾರರ ಯೋಗಕ್ಷೇಮವನ್ನು ಪ್ರಾರ್ಥಿಸಿ ಪರಮೇಶ್ವರ ಮಾರ್ಕಂಡೆ ನೇತೃತ್ವದಲ್ಲಿ ನವಗ್ರಹ ಹವನ, ಆಂಜನೇಯ ಹವನ ನಡೆಯಿತು. ಶ್ರೀಮಠದ ಧರ್ಮಕರ್ಮ ವಿಭಾಗದ ಸಂಯೋಜಕ ಕೇಶವ ಪ್ರಸಾದ್ ಕೂಟೇಲು, ಚಾತುರ್ಮಾಸ ಸಮಿತಿ ಅಧ್ಯಕ್ಷ ಯು.ಎಸ್.ಜಿ.ಭಟ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಕಾರ್ಯಾಲಯ ಕಾರ್ಯದರ್ಶಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನ ಕುಮಾರ್ ಉಪಸ್ಥಿರಿದ್ದರು.

Exit mobile version