Site icon Vistara News

Uttara Kannada News: ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ, 12 ಕಾಳಜಿ ಕೇಂದ್ರಗಳಲ್ಲಿ 437 ಜನರಿಗೆ ಆಸರೆ

Heavy rain in coastal areas of Uttara Kannada district

ಕಾರವಾರ: ಜಿಲ್ಲೆಯಲ್ಲಿ ಸೋಮವಾರ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಹೊನ್ನಾವರ ತಾಲೂಕಿನಲ್ಲಿ ತೆರೆಯಲಾದ 12 ಕಾಳಜಿ ಕೇಂದ್ರಗಳಲ್ಲಿ 437 ಮಂದಿ ಆಶ್ರಯ ಪಡೆದಿದ್ದು, ಅವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. (Uttara Kannada News) ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಪಟ್ಟ ತಾಲೂಕುಗಳ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ.

ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದ್ದು, ವೈದ್ಯರ ತಂಡದಿಂದ ಆರೋಗ್ಯ ಪರಿಶೀಲನೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯವನ್ನು ಒದಗಿಸಲಾಗಿದೆ.

ಇದನ್ನೂ ಓದಿ: Maldives: ವಿಶ್ವಕಪ್​ ಗೆಲುವಿನ ಸಂಭ್ರಮಾಚರಣೆಗೆ ಭಾರತ ತಂಡವನ್ನು ಆಹ್ವಾನಿಸಿದ ಮಾಲ್ಡೀವ್ಸ್‌

ಕದ್ರಾ ಜಲಾಶಯದಲ್ಲಿ ನೀರಿನ ಮಟ್ಟವು ಜಿಲ್ಲಾಡಳಿತ ನಿಗದಿಪಡಿಸಿದ ಮಟ್ಟಕ್ಕಿಂತ ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದಿಂದ 10,600 ಕೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 2 ಮನೆಗಳಿಗೆ ತೀವ್ರ ಹಾನಿ ಹಾಗೂ 13 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದ ಗುದ್ನಕಟ್ಟು ಮಜಿರೆಯಲ್ಲಿ ನೀರಿನ ಹರಿವು ಜಾಸ್ತಿ ಆಗಿದ್ದು, ಇಲ್ಲಿನ ನೇರಪೀಡಿತ ಪ್ರದೇಶದಲ್ಲಿನ 60 ಜನರನ್ನು ಎನ್‌ಡಿಆರ್‌ಎಫ್‌ ತಂಡದ ಮೂಲಕ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: Job Alert: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 6128 ಹುದ್ದೆ; ಪರೀಕ್ಷೆ ಸ್ವರೂಪ ಹೇಗಿರುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ?

ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಮಾನವ ಜೀವ ಹಾನಿಯಾಗದಂತೆ ಎಲ್ಲಾ ರೀತಿಯ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಾನುವಾರು ಪ್ರಾಣ ಹಾನಿ ತಡೆಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಯಾವುದೇ ಸಮಸ್ಯೆಗಳಲ್ಲಿ ಜಿಲ್ಲಾಡಳಿತದ ಉಚಿತ ತುರ್ತು ಸಹಾಯವಾಣಿ ಸಂಖ್ಯೆ 1077 ಗೆ ಹಾಗೂ ಮೊ.ಸಂ. ಸಂಖ್ಯೆ 94835 11015 ಕರೆ, ಮೆಸೇಜ್, ವಾಟ್ಸಾಪ್ ಸಂದೇಶ ಮತ್ತು ವಾಟ್ಸಾಪ್ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

Exit mobile version