ಬನವಾಸಿ: ಸಮೀಪದ ಮಧುರವಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಹಬ್ಬವು (Bull Bullying festival) ಪ್ರೇಕ್ಷಕರ ಮನಸೂರೆಗೊಳಿಸಿತು.
ಗ್ರಾಮದ ಶ್ರೀ ಮಾರಿಕಾಂಬಾ ಸೇವಾ ಸಮಿತಿ ಹಾಗೂ ಶ್ರೀ ರಾಮೇಶ್ವರ ಯುವಕ ಸಂಘದ ಸಹಯೋಗದಲ್ಲಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬದಲ್ಲಿ 200ಕ್ಕಿಂತಲು ಹೆಚ್ಚಿನ ಹೋರಿಗಳು ಪಾಲ್ಗೊಂಡಿದ್ದವು.
ಬೇರೆ ಬೇರೆ ಊರುಗಳಿಂದ ರೈತರು ತಮ್ಮ ಹೋರಿಗಳೊಂದಿಗೆ ಆಗಮಿಸಿ ಹಬ್ಬಕ್ಕೆ ಮೆರಗು ತಂದರು. ರೈತರು ತಮ್ಮ ಅಚ್ಚುಮೆಚ್ಚಿನ ಹೋರಿಗಳಿಗೆ ವಿವಿಧ ಹೆಸರುಗಳಿನ್ನಿಟ್ಟಿದ್ದರು. ಅಂತಹ ಹೆಸರು ಹೊಂದಿದ ಹೋರಿಗಳು ಹಬ್ಬದಲ್ಲಿ ಭಾಗವಹಿಸಿ ನೋಡುಗರನ್ನು ಬೆರಗುಗೊಳಿಸಿದವು.
ಸ್ಪರ್ಧೆಯಲ್ಲಿ ಓಡುವ ಹೋರಿಯ ಜತೆಗೆ ಅಖಾಡ ತೋರಿಸುವ ಹೋರಿಗಳನ್ನೊಮ್ಮೆ ಪ್ರಾಯೋಗಿಕವಾಗಿ ಅಖಾಡದಲ್ಲಿ ಓಡಿಸಲಾಗುತ್ತದೆ. ನಂತರ ಹಬ್ಬಕ್ಕೆಂದೇ ಅಣಿಯಾದ ಹೋರಿಗಳನ್ನು ಅತ್ಯಂತ ವೈಭವದೊಂದಿಗೆ ಅಲಂಕರಿಸಿ ಅಖಾಡದಲ್ಲಿ ತಂದು ಓಡಿಸಿದರು.
ಇದನ್ನೂ ಓದಿ: Benefits Of Yam: ಚಿನ್ನದಂಥ ಸುವರ್ಣ ಗಡ್ಡೆಯನ್ನು ತಿಂದವರೇ ಗಟ್ಟಿ!
ಮಾಲೀಕರು ತಮ್ಮ ಹೋರಿಗಳಿಗೆ ಒಣ ಕೊಬ್ಬರಿ ಮಾಲೆಗಳನ್ನು ಹಾಕಿ, ಏಳೆಂಟು ಜನರು ಹಗ್ಗದ ಸಹಾಯದಿಂದ ಹೋರಿ ಹಿಡಿದು ತಂದು ಅಖಾಡಕ್ಕೆ ಬಿಡುತ್ತಿದ್ದರು. ಕೊಬ್ಬರಿ ಮಾಲೆ ಹರಿಯಲು ಬರುವ ಪೈಲ್ವಾನರ ಕೈಗೆ ಸಿಗದಂತೆ ಓಡಿ ದಡ ಸೇರುತ್ತಿದ್ದವು.
ನೆರೆದ ಪ್ರೇಕ್ಷಕರು ಓಡಿ ಹೋಗುವ ಹೋರಿಗಳ ದೃಶ್ಯಗಳನ್ನು ಕಂಡು ಕೇಕೆ, ಚಪ್ಪಾಳೆ, ಶಿಳ್ಳೆ ಹೊಡೆದು ಹಬ್ಬಕ್ಕೆ ಮೆರಗು ತಂದರು. ಸಾವಿರಾರು ಅಭಿಮಾನಿಗಳು, ರೈತರು ಹೋರಿಗಳು ಓಡುವ ಓಟದ ದೃಶ್ಯಗಳನ್ನು ಕಣ್ತುಂಬಿಕೊಂಡರು.
ಇದನ್ನೂ ಓದಿ: Virat kohli : ತಮ್ಮ ದಾಖಲೆ ಮುರಿದ ವಿರಾಟ್ ಕೊಹ್ಲಿ ಬಗ್ಗೆ ತೆಂಡೂಲ್ಕರ್ ಹೇಳಿದ್ದೇನು?
ಹೋರಿ ಹಿಡಿಯುವಾಗ ಕೆಲವು ಪೈಲ್ವಾನರಿಗೆ ಸಣ್ಣ ಪುಟ್ಟ ಗಾಯಗಳಾದವು. ಇದನ್ನು ಬಿಟ್ಟರೆ ಹೋರಿ ಬೆದರಿಸುವ ಹಬ್ಬ ಬಹುತೇಕವಾಗಿ ಶಾಂತಿಯುತವಾಗಿ ನಡೆಯಿತು. ಸಂಜೆ ಹೋರಿಗಳಿಗೆ ಬಹುಮಾನ ವಿತರಿಸಲಾಯಿತು.