ಯಲ್ಲಾಪುರ: ಸಾಹಿತ್ಯದ (Literature) ಮೂಲಕ ಹೊಸತನ ಕಟ್ಟಿಕೊಡುವ ಪ್ರಯತ್ನ ಆಗಬೇಕೆಂದು ಹಿರಿಯ ಸಾಹಿತಿ, ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕವಿ, ಪತ್ರಕರ್ತ ಸುಬ್ರಾಯ ಬಿದ್ರೆಮನೆ ಅವರ ‘ಹೊಸ ಭಾವದ ತೇರು’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯಿಕ ಮೌಲ್ಯಗಳು ಬದಲಾಗುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಭಿನ್ನತೆಯಿಂದ ಅಭಿವ್ಯಕ್ತಗೊಳಿಸಬೇಕು. ಕವಿ ತಾನು ಬರೆದ ಹಳೆಯ ಬರಹಗಳನ್ನು ಓದಿ, ಇಂದಿನ ಅಗತ್ಯತೆಗಳಿಗೆ ಸ್ಪಂದಿಸುವಂತೆ ಸ್ವ ವಿಮರ್ಶೆಗೊಳಗಾಗಬೇಕು. ಸಾಹಿತ್ಯದ ಕೃತಿಗಳನ್ನು ಓದಿದವರು ಚರ್ಚಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಪರಿಷತ್ತು ಪ್ರತಿ ವರ್ಷ ಲೋಕಾರ್ಪಣೆಯಾದ ಕೃತಿಗಳ ಅವಲೋಕನಕ್ಕೆ ವೇದಿಕೆಯಾಗಬೇಕು ಎಂದರು.
ಕೃತಿ ಪರಿಚಯಿಸಿದ ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಕವಿತೆಗಳನ್ನು ಮತ್ತೆ ಮತ್ತೆ ಓದಿದಾಗ ವಿಭಿನ್ನ ಆಯಾಮ, ಅರ್ಥ ತೆರೆದುಕೊಳ್ಳುತ್ತದೆ ಎಂದರು.
ಇದನ್ನೂ ಓದಿ: Kannada Rajyotsava: ಕನ್ನಡ ನಾಡು ʻಕರ್ನಾಟಕʼ ಆಗಿದ್ದು ಹೇಗೆ?
ಕೃತಿಕಾರ ಸುಬ್ರಾಯ ಬಿದ್ರೆಮನೆ ಮಾತನಾಡಿ, ಜಾಲತಾಣಗಳ ಅಬ್ಬರದ ನಡುವೆ ಓದಿನ ಪ್ರವೃತ್ತಿ ಕ್ಷೀಣಿಸುತ್ತಿದ್ದು, ಪುಸ್ತಕ ಓದಿನ ಪ್ರವೃತ್ತಿಗೆ ಮೆರಗು ನೀಡುವ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನವಾಗಿದೆ ಎಂದರು. ಪತ್ರಕರ್ತ ಶ್ರೀಧರ ಅಣಲಗಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಬಿದ್ರೆಮನೆ ಅವರ ಹನಿಗವನಗಳು ಕೃತಿಯಲ್ಲಿ ಮಾತ್ರವಲ್ಲ, ಜಾಲತಾಣಗಳಲ್ಲೂ ಪ್ರಶಂಸೆಗೆ ಪಾತ್ರವಾಗಿದೆ. ಸಾಹಿತ್ಯ ಕೇವಲ ಶಬ್ದಗಳ ಜೋಡಣೆಯಾಗಿರಬಾರದು. ಅಂತಃಸತ್ವಗಳಿಂದ ಹೂರಣಗೊಳ್ಳಬೇಕು. ಸಾಮಾಜಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕು. ನವೆಂಬರ್ ತಿಂಗಳಲ್ಲಿ ಜಿಲ್ಲಾದ್ಯಂತ ಕನ್ನಡ ಕಾರ್ತೀಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೃತಿಕಾರ ಸುಬ್ರಾಯ ಬಿದ್ರೆಮನೆ ಅವರನ್ನು ಕಸಾಪ ವತಿಯಿಂದ ಗೌರವಿಸಲಾಯಿತು.
ಇದನ್ನೂ ಓದಿ: Viral News: ಮ್ಯಾನ್ಮಾರ್‌ನಲ್ಲಿ ಹೊಸ ಪ್ರಭೇದದ ಹಾವು ಪತ್ತೆ; ಏನಿದರ ವೈಶಿಷ್ಟ್ಯ?
ತಾಲೂಕು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ ಸ್ವಾಗತಿಸಿದರು. ಸಂಜೀವಕುಮಾರ ಹೊಸ್ಕೇರಿ ನಿರ್ವಹಿಸಿದರು. ಗಣಪತಿ ಕಂಚಿಪಾಲ ವಂದಿಸಿದರು.