Site icon Vistara News

Uttara Kannada News: ಗ್ರಾ.ಪಂ ಸದಸ್ಯರಿಗೆ ಮಾಹಿತಿ ನೀಡದೆ ಯೋಜನೆಗಳ ಅನುಷ್ಠಾನ: ಎಂ.ಕೆ. ಭಟ್ಟ ಯಡಳ್ಳಿ ಆರೋಪ

Elected Village Representatives Union Taluka President M.K. Bhatta Yadalli pressmeet in yallapur

ಯಲ್ಲಾಪುರ: ಇತ್ತೀಚಿನ ದಿನಮಾನದಲ್ಲಿ ಗ್ರಾಮ ಪಂಚಾಯಿತಿಗಳು (Gram Panchayats) ಹಿರಿಯ ಅಧಿಕಾರಿಗಳು ನೀಡುವ ಸುತ್ತೋಲೆಗಳನ್ನು ಜಾರಿ ಮಾಡುವ ಜಾರಿ ನಿರ್ದೇಶನಗಳಾಗಿ ಮಾರ್ಪಾಡಾಗಿರುವುದು ವಿಪರ್ಯಾಸ (Uttara Kannada News) ಎಂದು ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ತಾಲೂಕಾಧ್ಯಕ್ಷ ಎಂ.ಕೆ. ಭಟ್ಟ ಯಡಳ್ಳಿ ತಿಳಿಸಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಚುನಾಯಿತ ಪ್ರತಿನಿಧಿಗಳ ಒಕ್ಕೂಟದಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸರ್ಕಾರದ ಯಾವುದೇ ಯೋಜನೆಗಳಿದ್ದಲ್ಲಿ ಅದರ ಕುರಿತು ಗ್ರಾ.ಪಂ. ಸದಸ್ಯರಿಗೆ ಮಾಹಿತಿ ನೀಡದೆ ಮೇಲ್ದರ್ಜೆಯ ಅಧಿಕಾರಿಗಳೇ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಅದರಿಂದಾಗುವ ತೊಂದರೆಗಳಿಗೆ ಸ್ಥಳೀಯವಾಗಿರುವ ಚುನಾಯಿತ ಪ್ರತಿನಿಧಿಗಳು ಗ್ರಾಮಸ್ಥರಿಗೆ ಉತ್ತರಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಅಲ್ಲದೇ, ಸರ್ಕಾರದ ಕೆಲ ಯೋಜನೆಗಳಲ್ಲಿನ ಲೋಪದೋಷಗಳಿಂದ ಗ್ರಾಮ ಪಂಚಾಯಿತಿಯ ಮೇಲೆ ಹೊರೆ ಬೀಳುತ್ತಿದೆ ಎಂದು ಆರೋಪಿಸಿದ ಅವರು, ಕೂಸಿನ ಮನೆ ಯೋಜನೆಯನ್ನು ಜನವಸತಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, 7-8 ಕಿ.ಮೀ. ದೂರದಲ್ಲಿ ಕೆಲಸ ಮಾಡುವ ತಾಯಂದಿರಿಗೆ ಹಾಲುಣಿಸಲು ಹೇಗೆ ಸಾಧ್ಯ. ಇದು ಅತ್ಯಂತ ಅವೈಜ್ಞಾನಿಕ ಯೋಜನೆಯಾಗಿದೆ. ಇನ್ನು ಜಲ್‌ ನಲ್‌ ಯೋಜನೆಯಡಿ 2 ಮಹಿಳೆಯರಿಗೆ ತರಬೇತಿ ನೀಡಿ ನೇಮಕಾತಿ ಮಾಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಲಾಗಿದ್ದು ಇದಕ್ಕಾಗಿ ಗ್ರಾ.ಪಂ.ಗಳು 50000/- ತರಬೇತಿ ಮೊತ್ತವನ್ನು ಪಾವತಿಸಬೇಕಾಗಿದೆ. ಮುಂದೆ ಅವರ ವೇತನವನ್ನು ಸಹ ಪಂಚಾಯಿತಿಗಳೇ ಭರಿಸುವುದಾದರೆ, ಆರ್ಥಿಕ ಹೊರೆಯಾಗಲಿದೆ ಎಂದರು.

ಇದನ್ನೂ ಓದಿ: FASTag KYC: ಗಮನಿಸಿ; ಫಾಸ್ಟ್‌ಟ್ಯಾಗ್ ಕೆವೈಸಿ ಅಪ್‌ಡೇಟ್‌ ಮಾಡಲು ನಾಳೆಯೇ ಕೊನೆ ದಿನ; ಇಲ್ಲಿದೆ ಸಂಪೂರ್ಣ ವಿವರ

ಇನ್ನುಳಿದಂತೆ ಜೆ.ಜೆ.ಎಂ. ಯೋಜನೆಯಡಿ ನಿರ್ಮಿಸಲಾದ ನೀರಿನ ಟ್ಯಾಂಕರ್‌ಗಳ ಮೇಲೆ ಮಾಹಿತಿ ಬರೆಸಲು ಪ್ರತಿ ಟ್ಯಾಂಕ್‌ಗೆ 2500/- ಪಾವತಿಸುವಂತೆ ಸೂಚಿಸಿದ್ದು, ಪ್ರತಿ ಪಂಚಾಯಿತಿಯಲ್ಲಿ 100-200 ಟ್ಯಾಂಕ್‌ಗಳಿವೆ. ಅಷ್ಟು ದೊಡ್ಡ ಮೊತ್ತವನ್ನು ಪಂಚಾಯಿತಿಗಳು ಪಾವತಿಸುವುದು ಕಷ್ಟ ಸಾಧ್ಯ. ಅಲ್ಲದೇ, ಪ್ರತಿ ಪಂಚಾಯಿತಿಗಳಲ್ಲಿ ಗ್ರಂಥಾಲಯವನ್ನು ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದ್ದು, ಕರ ವಸೂಲಿಯಿಂದ ಬರುವ ಶೇ.6 ರಷ್ಟು ಮೊತ್ತವನ್ನು ಜಿಲ್ಲಾ ಪಂಚಾಯಿತಿಗೆ ವರ್ಗಾಯಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಗ್ರಂಥಾಲಯ ನಿರ್ವಹಣೆ ನಾವು ಮಾಡುತ್ತಿರುವಾಗ ಹಣವನ್ನು ಜಿಲ್ಲಾ ಪಂಚಾಯಿತಿಗೆ ವರ್ಗಾಯಿಸುವುದು ಆಕ್ಷೇಪಣಾರ್ಹ.

ಇವೆಲ್ಲವೂ ಪಂಚಾಯಿತಿಗೆ ಹೊರೆಯಾಗುತ್ತಿದ್ದು, ರಾಜ್ಯ ಮಟ್ಟದ ನಿವೃತ್ತ ಐ.ಎ.ಎಸ್‌. ಅಧಿಕಾರಿಗಳ ಕ್ರಿಸ್ಟ್‌ ಎಂಬ ಸಂಸ್ಥೆಯು ಇವೆಲ್ಲವುಗಳ ಮೂಲವಾಗಿದೆ ಎಂದು ಆರೋಪಿಸಿದ ಅವರು, ಮೇಲಾಧಿಕಾರಿಗಳು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಮೂಲಕ ಗ್ರಾ.ಪಂ.ಗಳ ಮೇಲೆ ಒತ್ತಡ ಹೇರುತ್ತಿದ್ದು, ಪ್ರತಿನಿಧಿಗಳು ಹೈರಾಣವಾಗುವಂತಾಗಿದೆ. ಈ ರೀತಿಯ ಹಲವಾರು ಸಮಸ್ಯೆಗಳನ್ನು ವಿರೋಧಿಸಿ ಇದೇ ಫೆ.8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡು ಸಹಕರಿಸಬೇಕು ಎಂದು ತಿಳಿಸಿದರು.

ಕಂಪ್ಲಿ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಭೋವಿವಡ್ಡರ್‌ ಮಾತನಾಡಿ, ಕೆರೆಹೊಸಳ್ಳಿಯಲ್ಲಿ ಇತ್ತೀಚೆಗೆ 3.5 ಕೋಟಿ ಮೊತ್ತದಲ್ಲಿ ನಿರ್ಮಾಣಗೊಂಡು, ಉದ್ಘಾಟನೆಗೊಂಡ ಏತ ನೀರಾವರಿ ಯೋಜನೆಯ ಕುರಿತು ಸ್ಥಳೀಯ ಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಗ್ರಾಮಸ್ಥರಲ್ಲಿ ಕೆಲವರಿಗೆ ಈ ಯೋಜನೆಯ ಉಪಯೋಗ ದೊರಯದೇ ಇರುವುದರಿಂದ ಅವರು ನೇರವಾಗಿ ನಮ್ಮನ್ನು ದೂಷಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಗ್ರಾ.ಪಂ. ಸದಸ್ಯರಿಗೆ ಮಾಹಿತಿ ನೀಡಿದೇ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ನಮಗೆ ಸಮಸ್ಯೆ ತಂದೊಡ್ಡಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಯಾಗದಿರಲು, ಎಲ್ಲಾ ಇಲಾಖೆಗಳು ಸದಸ್ಯರಿಗೆ ಮಾಹಿತಿ ನೀಡಿ ಯೋಜನೆಗಳನ್ನು ಆರಂಭಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Money Guide : ಸೈಟ್‌ ಖರೀದಿಸಲು ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಾ, ಬಡ್ಡಿ ಎಷ್ಟಿರುತ್ತದೆ?

ಈ ಸಂದರ್ಭದಲ್ಲಿ ಚು.ಗ್ರಾ.ಪ್ರ. ರಾಜ್ಯ ಒಕ್ಕೂಟದ ಸದಸ್ಯ ಸುಬ್ಬಣ್ಣ ಕುಂಟೆಗಾಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸದಾಶಿವ ಚಿಕ್ಕೊತ್ತಿ, ಪ್ರತಿನಿಧಿಗಳಾದ ರೇಣುಕಾ ಭೋವಿವಡ್ಡರ್‌, ನಾಗವೇಣಿ ಸಿದ್ದಿ, ಸುನಂದಾ, ಪ್ರಭಾ ನಾಯ್ಕ, ಶ್ರೀಪತಿ ಮುದ್ದೇಪಾಲ, ಮೀನಾಕ್ಷಿ ಭಟ್‌, ಮತ್ತಿತರಿದ್ದರು.

Exit mobile version