Site icon Vistara News

Uttara Kannada News: ತೆಂಗಿನಗೇರಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟನೆ

Inauguration of new room of government school in Tenginageri village

ಯಲ್ಲಾಪುರ: ತಾಲೂಕಿನ ತೆಂಗಿನಗೇರಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯ ಉದ್ಘಾಟನಾ ಕಾರ್ಯಕ್ರಮವನ್ನು ಗುರುವಾರ (Uttara Kannada News) ಹಮ್ಮಿಕೊಳ್ಳಲಾಗಿತ್ತು.

ತೆಂಗಿನಗೇರಿ ಗ್ರಾಮಸ್ಥರ ಸಹಕಾರದಿಂದ ನಿರ್ಮಾಣಗೊಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ಆರ್‌. ಹೆಗಡೆ ಉದ್ಘಾಟಿಸಿದರು. ಬಳಿಕ ಮಾತನಾಡಿ, ತಾಲೂಕಿನ ತೆಂಗಿನಗೇರಿಯಲ್ಲಿ ಅಕ್ಷರ ಕ್ರಾಂತಿಯೇ ಆಗಿದೆ. ಶಾಲೆ ಅಷ್ಟೇ ಮಂಜೂರಾಗಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಇದ್ದಂತಹ ಸಂದರ್ಭದಲ್ಲಿ ಕ್ರಿಯಾಶೀಲ ಶಿಕ್ಷಕ ಗಂಗಾಧರ ಅವರು ಗ್ರಾಮದ ಗೌಳಿ ಸಮುದಾಯದವರ ವಿಶ್ವಾಸ ಗಳಿಸಿ, ದೇಣಿಗೆ ಸಂಗ್ರಹಿಸಿ ಶಾಲಾ ಕೊಠಡಿ ನಿರ್ಮಿಸುವ ಮೂಲಕ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಿರುವುದು ಮಾದರಿ ಕಾರ್ಯ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗಲಿದೆ. ಇಲಾಖೆಯವರೊಡನೆ ಸಮುದಾಯದವರ ಸಹಭಾಗಿತ್ವ ಇದ್ದರೆ ಅಸಾಧ್ಯವಾದದ್ದನ್ನು ಸಾದ್ಯವಾಗಿಸಬಹುದು ಎಂಬುದನ್ನು ಇಂದು ತೋರಿಸಿಕೊಟ್ಟಿದ್ದಾರೆ ಎಂದರು.‌

ಇದನ್ನೂ ಓದಿ: Uttara Kannada News: ಮುರ್ಡೇಶ್ವರದಲ್ಲಿ ಮಾ.8 ರಂದು ಮಹಾಶಿವರಾತ್ರಿ ಜಾಗರಣೆ ಉತ್ಸವ

ಶಿಕ್ಷಣ ಸಂಯೋಜಕ ಸಂತೋಷ ಜಿಗಳೂರ ಮಾತನಾಡಿ, ಈ ಶಾಲೆಯಲ್ಲಿನ ಮಕ್ಕಳು ಕಲಿಕೆಯಲ್ಲಿ ತುಂಬಾ ಚುರುಕಾಗಿದ್ದಾರೆ. ಶಿಕ್ಷಕರ ಕ್ರೀಯಾಶೀಲತೆಯ ಬಗ್ಗೆ ಕಲಿಕಾ ಚಪ್ಪರ ನೋಡಿದರೆ ತಿಳಿಯುತ್ತದೆ. ಈ ಶಾಲೆ ತಾಲೂಕಿನ ಟಾಪ್ 5 ಗಳಲ್ಲಿ ಒಂದಾಗುವ ಭರವಸೆ ಮೂಡಿಸಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಗಂಗಾರಾಮ ಪಾಟೀಲ ಮಾತನಾಡಿ, ಊರಿನವರ ಪರಿಶ್ರಮ ಈ ಶಾಲೆಯ ಕೊಠಡಿಯಲ್ಲಿದೆ. ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕ ಗಂಗಾಧರ ಅವರ ಮಾರ್ಗದರ್ಶನದಲ್ಲಿ ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಸಾಧ್ಯವಾಗಿದೆ. ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.

ಪತ್ರಕರ್ತೆ ಪ್ರಭಾ ಜಯರಾಜ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ನಾಯ್ಕ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಸ್ತಪ್ರತಿ ಬಿಡುಗಡೆ ಮಾಡಲಾಯಿತು. ಪ್ರಭಾರಿ ಮುಖ್ಯೋಧ್ಯಾಪಕ ಗಂಗಾಧರ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.

ಇದನ್ನೂ ಓದಿ: Fire Accident: ನೆಲದಿಮ್ಮನಹಳ್ಳಿ ಗ್ರಾಮದಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ 5 ಗುಡಿಸಲು

ಈ ಸಂದರ್ಭದಲ್ಲಿ ಪತ್ರಕರ್ತ ಕೇಬಲ್ ನಾಗೇಶ, ಸಿಆರ್‌ಪಿ ದಿಲೀಪ್ ದೊಡ್ಡಮನಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸಂಗೀತಾ ಪಾಟೀಲ, ಸಿಆರ್‌ಪಿ ವೆಂಕಟರಾಯ, ಎಸ್‌ಡಿಎಂಸಿ ಉಪಾಧ್ಯಕ್ಷ ಸೋನು ಕೋಕರೆ, ಹಿರಿಯರಾದ ರಾಮು ಸಿಂಧೆ, ಶಾಮು ಸಿಂಧೆ, ಜಾನು ಪಟಕಾರೆ, ಶಿಕ್ಷಕರಾದ ಸಂತೋಷ ಧಾರವಾಡಕರ, ದೇವಕ್ಕಾ, ಸೋನು ಇತರರು ಇದ್ದರು.

Exit mobile version