ಯಲ್ಲಾಪುರ: ನಾವು ಚಿಕ್ಕವರಿರುವಾಗ ನಮ್ಮ ಹಿರಿಯರು ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದರು, ಇಂದು ಅಂತಹ ಉತ್ತಮ ಸಂಸ್ಕಾರಗಳಿಂದ ನಮ್ಮ ಮಕ್ಕಳನ್ನು ನಾವೆಲ್ಲ ವಂಚಿಸುತ್ತಿದ್ದೇವೆ, ಈ ಕುರಿತು ಪಾಲಕರಾದ ನಾವು ಚಿಂತನೆ ಮಾಡಲೇಬೇಕಾದ ಕಾಲಘಟ್ಟದಲ್ಲಿದ್ದೇವೆ ಎಂದು ಉಮ್ಮಚಗಿ ವ್ಯ..ಸೇ.ಸಾ. ಸಂಘದ ಅಧ್ಯಕ್ಷ ಎಂ.ಜಿ. ಭಟ್ ಸಂಕದಗುಂಡಿ ಹೇಳಿದರು.
ತಾಲೂಕಿನ ಉಮ್ಮಚಗಿಯ ಸಹಕಾರಿ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ, ಮಕ್ಕಳ ಪ್ರಕಾರ, ಶ್ರೀಮಾತ ವೈದಿಕ ಶಿಕ್ಷಣ ಸಂಸ್ಥೆ ಉಮ್ಮಚಗಿ ಮತ್ತು ಉಮ್ಮಚಗಿ ವ್ಯ.ಸೇ.ಸಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ʼನಾ ಕಂಡಂತೆ ಲಕ್ಷ್ಮಣʼ ರಾಜ್ಯಮಟ್ಟದ ಮಕ್ಕಳ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭಾಸಾಪ ರಾಜ್ಯಮಟ್ಟದಲ್ಲಿ ಇಂತಹ ಗೋಷ್ಠಿ ಹಮ್ಮಿಕೊಂಡಿರುವುದರಿಂದ ಮಕ್ಕಳಿಗೆ ರಾಮಾಯಣದ ಕುರಿತು ಅಭ್ಯಾಸ ಮಾಡುವುದಕ್ಕೆ ಅವಕಾಶ ಲಭಿಸಿದೆ ಎಂದರು.
ಇದನ್ನೂ ಓದಿ: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ. ಎಲ್. ನಾರಾಯಣಸ್ವಾಮಿ ನೇಮಕ
ಅಧ್ಯಕ್ಷತೆ ವಹಿಸಿದ್ದ ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ಟ ಮಾತನಾಡಿ, ನಮಗೆ ಸ್ವಾತಂತ್ರ್ಯ ಬಂದಮೇಲೇಯೇ ನಮ್ಮ ಸಂಸ್ಕೃತಿಯ, ಪರಂಪರೆಯ ಮೇಲೆ ಆಕ್ರಮಣ ಪ್ರಾರಂಭವಾಯಿತು. ಆದರೆ ಈ ದೇಶದಲ್ಲಿ ಅಭಾಸಾಪ ಚಟುವಟಿಕೆ ಪ್ರಾರಂಭವಾದ ನಂತರ ಆಕ್ರಮಣ ಕಡಿಮೆಯಾಗುತ್ತಿದೆ. ಆದರೂ ನಮ್ಮ ಸಮಾಜ ಮೌಲ್ಯದಿಂದ ದೂರವಾಗುತ್ತಿದೆ. ನಮ್ಮ ಸಂಸ್ಥೆಯ ಉದ್ದೇಶ ಭವಿಷ್ಯತ್ತಿನಲ್ಲಿ ಯುವ ಜನಾಂಗ ಸನ್ಮಾರ್ಗದಲ್ಲಿ ಸಾಗಬೇಕೆಂಬುದಾಗಿದೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಸಂಘಟಕಿ ಸುಜಾತಾ ಹೆಗಡೆ ಕಾಗಾರಕೊಡ್ಲು ಆಶಯ ಭಾಶಣ ಮಾಡಿ, ಜಗತ್ತಿನ ಅನೇಕ ರಾಷ್ಟ್ರಗಳು ಭಾರತೀಯ ಸಂಸ್ಕ್ರತಿಯನ್ನು ಗೌರವಿಸುತ್ತಿದೆ. ನಮ್ಮ ಮಕ್ಕಳಿಗೆ ರಾಷ್ಟ್ರೀಯತೆಯ ಅರಿವನ್ನು ಮೂಡಿಸಬೇಕು. ಸಮಷ್ಟಿಗೆ ತೊಡಕಾಗದ ಸಾಹಿತ್ಯ ಬರಬೇಕು. ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರ ಆದರ್ಶ ಮತ್ತು ಆಪ್ತವಾಗಿದೆ. ನಮ್ಮ ವೇದಗಳು, ಪುರಾಣಗಳು, ಸಂಸ್ಕೃತಿಯನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದಿದೆ. ಆ ದೃಷ್ಟಿಯಿಂದ ನಮ್ಮ ನಾಡಿನ ಅನೇಕ ಜಿಲ್ಲೆಗಳಿಂದ ಬಂದ ಮಕ್ಕಳಿಗೆ ರಾಮಾಯಣದ ಕುರಿತು ತಮ್ಮ ಯೋಚನೆಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಇದನ್ನೂ ಓದಿ: Ind vs Aus : 3ನೇ ಪಂದ್ಯದ ವೇಳೆ ಆಟಗಾರರು ಸೃಷ್ಟಿಸಬಲ್ಲ ಕೆಲವು ಮೈಲುಗಲ್ಲುಗಳ ವಿವರ ಇಲ್ಲಿದೆ
ಶ್ರೀಮಾತಾ ವೈದಿಕ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹೇಶ ಭಟ್ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. ಪ್ರೇರಣಾ ಭಟ್ಟ, ಸಿಂಧೂರಾ ಹೆಗಡೆ ಪ್ರಾರ್ಥಿಸಿದರು.