Site icon Vistara News

Mango Season: ಮಾರುಕಟ್ಟೆಗೆ ಬಂತು ಉತ್ತರ ಕನ್ನಡದ ಪ್ರಸಿದ್ಧ ಕರಿಈಶಾಡು ಮಾವು; ಡಜನ್‌ಗೆ 700 ರೂ.!

mango in karwar

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ಮಾವಿನಹಣ್ಣು ಅಂದರೆ ಸಾಕು ಯಾರಿಗಾದರೂ ಮೊದಲು ನೆನಪಾಗೋದೇ ಇಲ್ಲಿನ ಪ್ರಸಿದ್ಧ ಕರಿಈಶಾಡು ಮಾವಿನಹಣ್ಣು. ಜಿಲ್ಲೆಯ ಕರಾವಳಿ ಪ್ರದೇಶವಾದ ಕಾರವಾರ, ಅಂಕೋಲಾ, ಕುಮಟಾ ತಾಲೂಕಿನಲ್ಲಿ ಮಾತ್ರ ಬೆಳೆಯುವ ಈ ಕರಿಈಶಾಡು ಮಾವಿನಹಣ್ಣು ತನ್ನದೇ ಆದ ವೈಶಿಷ್ಟ್ಯದ ಮೂಲಕ ಹೆಸರಾಗಿದೆ. ಮಳೆಗಾಲದ ಪೂರ್ವದಲ್ಲಿ ಸಿಗುವ ಈ ಹಣ್ಣು (Mango Season) ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಗ್ರಾಹಕರು ಹಣ್ಣಿನ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ, ಇದು ಬಲು ದುಬಾರಿಯಾಗಿದ್ದು, ಡಜನ್‌ಗೆ 700 ರೂಪಾಯಿಯಾಗಿದೆ.

ಹಣ್ಣುಗಳ ರಾಜ ಎಂದೇ ಖ್ಯಾತಿಯಾಗಿರುವ ಮಾವಿನಹಣ್ಣಿನ ಸೀಸನ್ ಈಗ ಪ್ರಾರಂಭವಾಗಿದೆ. ಮಾರುಕಟ್ಟೆಯಲ್ಲಿ ವಿಧ ವಿಧವಾದ ಮಾವಿನ ಹಣ್ಣುಗಳು ಲಗ್ಗೆ ಇಡುವ ಮೂಲಕ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಮಾವು ಪ್ರಿಯರಿಗಂತೂ ಯಾವ ಹಣ್ಣು ತೆಗೆದುಕೊಳ್ಳೋಣ ಅನ್ನುವಷ್ಟು ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಾತ್ರ ಬೆಳೆಯುವ ಪ್ರಸಿದ್ಧ ಕರಿಈಶಾಡು ಜಾತಿಗೆ ಸೇರಿದ ಮಾವು ಸಹ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತನ್ನ ವಿಶಿಷ್ಟ ರುಚಿಯಿಂದಲೇ ಗುರುತಿಸಿಕೊಳ್ಳುವ ಕರಿಈಶಾಡು ಇದೀಗ ಮಾರುಕಟ್ಟೆಯಲ್ಲಿ ತನ್ನ ಕಾರುಬಾರನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: Mango Benefits: ಬೇಸಿಗೆಯಲ್ಲಿ ಮಾವಿನಹಣ್ಣು ಎಂಬ ಸಂಪೂರ್ಣ ಆಹಾರವನ್ನು ಎಂದಿಗೂ ಬಿಡಬೇಡಿ!

ಮಾವಿನಹಣ್ಣು ಮಾರಾಟ

ಇಲ್ಲಿ ಹೆಚ್ಚಾಗಿ ಬೆಳೆಯುವ ಮಾವು

ಅಪರೂಪದ ಮಾವು ಎನ್ನಲಾದ ಈ ಕರಿಈಶಾಡು ಮಾವನ್ನು ಕೇವಲ ಕರಾವಳಿ ತಾಲೂಕುಗಳಾದ ಅಂಕೋಲಾ, ಕಾರವಾರ ಹಾಗೂ ಕುಮಟಾದ ಕೆಲ ಭಾಗದಲ್ಲಿ ಮಾತ್ರ ಬೆಳೆಯಲಾಗುತ್ತದೆ. ಅದರಲ್ಲೂ ಅಂಕೋಲಾ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಹಾಲಕ್ಕಿ ಸಮುದಾಯದವರು ಈ ಮಾವನ್ನು ಬೆಳೆಯುತ್ತಾರೆ. ಇದೀಗ ಹಲವೆಡೆಯಿಂದ ಮಹಿಳೆಯರು ತಾವು ಬೆಳೆದ ಮಾವನ್ನ ಮಾರುಕಟ್ಟೆಗೆ ತಂದು ಮಾರಾಟಕ್ಕೆ ಇಳಿದಿದ್ದಾರೆ. ಕಾರವಾರ ಮಾರುಕಟ್ಟೆಗೆ ಕರಿಈಶಾಡು ಮಾವು ಲಗ್ಗೆಇಟ್ಟಿದ್ದು ಹಾಲಕ್ಕಿ ಮಹಿಳೆಯರು ಸಾಲು ಸಾಲಾಗಿ ಕುಳಿತು ಕರಿಈಶಾಡು ಮಾವಿನ ಮಾರಾಟ ಕಾಯಕದಲ್ಲಿ ಬ್ಯುಸಿಯಾಗಿದ್ದಾರೆ.

ಮಾವಿನಹಣ್ಣು ಮಾರಾಟ

ನೈಸರ್ಗಿಕವಾಗಿ ಬೆಳದ ಈ ಕರಿಈಶಾಡ ಮಾವಿಗೆ ಯಾವುದೇ ರಾಸಾಯನಿಕ ಬಳಸದೇ ಬೆಳೆಸುವುದು ಇದರ ವಿಶೇಷ. ಪ್ರತಿವರ್ಷ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಬೆಳೆ ಬರುವುದರಿಂದ ಮಾವು ಬೆಳೆದ ಹಾಲಕ್ಕಿ ಮಹಿಳೆಯರು ಹೆದ್ದಾರಿ ಪಕ್ಕ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಜತೆಗೆ ಸ್ಥಳೀಯವಾಗಿ ಬೆಳೆಯುವ ಪೈರಿ, ಬನಾಟೆ ಆಪೂಸ್, ರತ್ನಗಿರಿ ತಳಿಯ ಮಾವಿನ ಹಣ್ಣುಗಳನ್ನು ಸಹ ಮಾರಾಟಕ್ಕೆ ತರುತ್ತೇವೆ ಎನ್ನುತ್ತಾರೆ ಹಾಲಕ್ಕಿ ಮಹಿಳೆ ಮಂಕಾಳಿ ಗೌಡ.

ಮಾವಿನಹಣ್ಣು ಮಾರಾಟ

ಡಜನ್‌ಗೆ 400ರಿಂದ 700 ರೂಪಾಯಿ!

ಈ ಬಾರಿ ಕರಿಈಶಾಡು ಮಾವಿನಹಣ್ಣು 400ರಿಂದ 700 ರೂಪಾಯಿ ಡಜನ್‌ಗೆ ಮಾರಾಟವಾಗುತ್ತಿದ್ದು, ಉಳಿದಂತೆ ಇತರೆ ಹಣ್ಣುಗಳು 200ರಿಂದ 400 ರೂಪಾಯಿ ಡಜನ್‌ಗೆ ಮಾರಾಟವಾಗುತ್ತಿವೆ. ಅದರಲ್ಲೂ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ಗ್ರಾಹಕರು ಸಹ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದಾರೆ. ಕಾರವಾರ ಮಾತ್ರವಲ್ಲದೆ ನೆರೆಯ ಗೋವಾ, ಮಹಾರಾಷ್ಟ್ರದಿಂದ ಸಹ ಜನರು ಸ್ಥಳೀಯವಾಗಿ ಬೆಳೆದ ಮಾವಿನಹಣ್ಣು ಖರೀದಿಸಿ ಕೊಂಡೊಯ್ಯುತ್ತಾರೆ.

Exit mobile version