ಕಾರವಾರ: ಜಿಲ್ಲೆಯ ರೈತರ ಖಾತೆಗಳಿಗೆ ಜಮಾವಣೆಯಾಗಿರುವ ಬೆಳೆ ಪರಿಹಾರದ ಮೊತ್ತವನ್ನು, ಯಾವುದೇ ಕಾರಣಕ್ಕೂ ರೈತರು ಬ್ಯಾಂಕ್‌ಗಳಿಂದ ಪಡೆದ ಇತರೆ ಸಾಲದ ಮೊತ್ತಕ್ಕೆ ಸರಿಹೊಂದಿಸಿಕೊಳ್ಳದಂತೆ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ ಸೂಚನೆ (Uttara Kannada News) ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದು ಈ ಸಾಲದ ಮೊತ್ತಕ್ಕೆ ರೈತರ ಖಾತೆಗೆ ಜಮಾವಣೆಯಾದ ಬೆಳೆ ಪರಿಹಾರದ ಮೊತ್ತವನ್ನು ಯಾವುದೇ ಕಾರಣಕ್ಕೂ ಸಾಲದ ಮೊತ್ತಕ್ಕೆ ಸರಿಹೊಂದಿಸದಂತೆ ಮುಖ್ಯಮಂತ್ರಿಗಳು ಬರ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿರುವ ನಿರ್ದೇಶನವನ್ನು ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳು ಪಾಲಿಸುವಂತೆ ತಿಳಿಸಿದರು.
ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಕ್ಕಾಗಿ ಬ್ಯಾಂಕ್‌ಗಳ ಮೂಲಕ ಸಾಲ ಪಡೆಯಲು ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸರ್ಕಾರಿ ಯೋಜನೆಯ ಹಾಗೂ ಸಾಲ ಪಡೆಯಲು ಇರಬೇಕಾದ ಅರ್ಹತೆಗಳ ಬಗ್ಗೆ ವಿವರವಾದ ಮಾಹಿತಿ ನೀಡಬೇಕು.
ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!
ಅರ್ಜಿಗಳ ಜತೆ ಸಲ್ಲಿಸಿದ ಪೂರಕ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ದೊರೆಯುವಂತೆ ನೋಡಿಕೊಳ್ಳಬೇಕು. ಈ ಸಂಬಂಧ ಬ್ಯಾಂಕ್ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಸರ್ಕಾರಿ ಯೋಜನೆಗಳ ಸಂಪೂರ್ಣ ಯಶಸ್ವಿಗೆ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಸಾಲ ಮತ್ತು ಠೇವಣಿ ಅನುಪಾತವು ನಿಗದಿತ ಗುರಿಗಿಂತ ಕಡಿಮೆಯಿದ್ದು, ಸಾಲ ಮತ್ತು ಠೇವಣಿ ಅನುಪಾತವು ಹೆಚ್ಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾಲಗಳನ್ನು ವಿತರಿಸುವಂತೆ ತಿಳಿಸಿದ ಅವರು, ಪಶುಪಾಲನೆ ಮತ್ತು ಮೀನುಗಾರಿಕಾ ಇಲಾಖೆ ವತಿಯಿಂದ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ವಿತರಿಸುವಂತೆ ಹಾಗೂ ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ನೀಡುವಂತೆ ಸೂಚಿಸಿದರು.
ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ, ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ವಿವರವಾದ ಮಾಹಿತಿ ನೀಡಿ, ಈ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾದ ಚಟುವಟಿಕೆಗಳಿಗೆ ಆದ್ಯತೆಯಲ್ಲಿ ಸಾಲ ವಿತರಿಸುವಂತೆ ತಿಳಿಸಿದರು.
ಮುದ್ರಾ ಯೋಜನೆ ಮತ್ತು ಸ್ಟಾರ್ಟಪ್‌ಗಳಿಗೆ ಸಾಲ ವಿತರಿಸುವ ಕುರಿತಂತೆ ಎಲ್ಲಾ ಬ್ಯಾಂಕ್‌ಗಳು ಜಿಲ್ಲೆಯಾದ್ಯಂತ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಯುವ ಜನತೆಗೆ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ನೆರವಾಗುವಂತೆ ಜಿಪಂ ಸಿಇಒ ಈಶ್ವರ ಕಾಂದೂ ತಿಳಿಸಿದರು.
ಇದನ್ನೂ ಓದಿ: Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!
ಆರ್‌ಬಿಐ ಮ್ಯಾನೆಜರ್ ಅಲೋಕ ಕುಮಾರ್ ಸೀನ್ಹಾ ಮಾತನಾಡಿ, ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಪ್ರತಿ ತಿಂಗಳು ತಮ್ಮ ವ್ಯಾಪ್ತಿಯ ಗ್ರಾಹಕರೊಂದಿಗೆ ತಪ್ಪದೇ ಸಭೆ ನಡೆಸುವಂತೆ ಮತ್ತು ಗ್ರಾಹಕರಿಗೆ ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರದಿಂದಿರುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ಆನ್‌ಲೈನ್ ವಂಚನೆಗಳ ಬಗ್ಗೆ ಸೈಬರ್ ಕ್ರೈಂ ಹೆಲ್ಪ್‌ಲೈನ್ ಸಂಖ್ಯೆ 1930 ಗೆ ಮಾಹಿತಿ ನೀಡುವಂತೆ ತಿಳಿಸಿದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಬಿ.ಎಸ್. ಶುಭಾ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ತ್ರೆಮಾಸಿಕ ಅವಧಿಯಲ್ಲಿ 7824 ಕೋಟಿ ಸಾಲ ವಿತರಣೆ ಗುರಿಗೆ 7748 ಕೋಟಿ ರೂ ಸಾಲ ವಿತರಿಸಿ 99.02% ಸಾಧನೆ ಮಾಡಲಾಗಿದೆ. ಕೃಷಿ ವಲಯಕ್ಕೆ 2824 ಕೋಟಿ, ಮಧ್ಯಮ ಮತ್ತು ಸಣ್ಣ ವಲಯಕ್ಕೆ 2616 ಕೋಟಿ ಸಾಲ ವಿತರಿಸಲಾಗಿದೆ, ಗೃಹ ನಿರ್ಮಾಣ ಮತ್ತು ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್‌ಗಳು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಕಳೆದ ಸಾಲಿಗೆ ಹೋಲಿಸಿದಲ್ಲಿ ಪ್ರಗತಿಯಾಗಿದ್ದು, ಸಾಲ ನೀಡಿಕೆ ಪ್ರಮಾಣ ಇನ್ನೂ ಹೆಚ್ಚಳವಾಗಬೇಕಿದೆ ಎಂದರು.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೀಗಿದೆ
ಲೀಡ್ ಬ್ಯಾಂಕ್ ಮ್ಯಾನೇಜರ್ ರೇವತಿ ಸುಧಾಕರ್, ನಬಾರ್ಡ್ ಡಿಡಿಎಂ ಸುಶೀಲ್ ನಾಯ್ಕ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಹಲವು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.