Site icon Vistara News

Uttara Kannada News: ಲೋಕಸಭಾ ಚುನಾವಣೆ; ಗೋವಾ ಗಡಿಯಲ್ಲಿ ಹೆಚ್ಚಿನ ನಿಗಾ ವಹಿಸಿ: ಡಿಸಿ ಮಾನಕರ್

Lok Sabha Election; meeting by DC Gangubai Manakar at Karwar

ಕಾರವಾರ: ಲೋಕಸಭಾ ಚುನಾವಣಾ (Lok Sabha Election) ಹಿನ್ನಲೆಯಲ್ಲಿ ಜಿಲ್ಲೆಗೆ ಹೊಂದಿಕೊಂಡಿರುವ ಗೋವಾ ಗಡಿಭಾಗದಲ್ಲಿ, ಗೋವಾ ರಾಜ್ಯದಿಂದ ಉತ್ತರ ಕನ್ನಡ ಜಿಲ್ಲೆಗೆ ಅನಧಿಕೃತವಾಗಿ ಮದ್ಯ, ಮಾದಕ ವಸ್ತುಗಳು, ನಗದು ಮತ್ತು ಮತದಾರರಿಗೆ ಉಚಿತ ಉಡುಗೊರೆ ನೀಡುವ ಯಾವುದೇ ಸರಕುಗಳ ಸಾಗಾಣಿಕೆ ಆಗದಂತೆ ಹೆಚ್ಚಿನ ನಿಗಾ ವಹಿಸುವಂತೆ ದಕ್ಷಿಣ ಗೋವಾದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ (Uttara Kannada News) ತಿಳಿಸಿದರು.

ಲೋಕಸಭಾ ಚುನಾವಣಾ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ನಡೆದ ವೀಡಿಯೋ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Nayab Singh Saini: ಬಹುಮತ ಸಾಬೀತು ಪಡಿಸಿದ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ

ಚುನಾವಣಾ ಸಂದರ್ಭದಲ್ಲಿ ಗೋವಾ ರಾಜ್ಯದ ಮೂಲಕ ಜಿಲ್ಲೆಗೆ ಅನಧಿಕೃತವಾಗಿ ಮತ್ತು ಕಳ್ಳ ಸಾಗಾಣಿಕೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸಾಗಾಣಿಕೆ ಆಗುವ ಸಾಧ್ಯತೆಗಳಿದ್ದು, ತಮ್ಮ ರಾಜ್ಯದ ಗಡಿಯಲ್ಲಿ ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸುವಂತೆ ಗೋವಾ ರಾಜ್ಯದ ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಗೋವಾ ಗಡಿಯಿಂದ ಜಿಲ್ಲೆಯೊಳಗೆ ಅರಣ್ಯ ಮೂಲಕ ಕಾಲುದಾರಿಯಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಮಾಡುವವರ ವಿರುದ್ದ ಕೂಡಾ ಹೆಚ್ಚು ನಿಗಾ ಇರಿಸುವಂತೆ ತಿಳಿಸಿದರು.

ಇದನ್ನೂ ಓದಿ: ICC Test Rankings: ಭಾರತೀಯ ಆಟಗಾರರದ್ದೇ ಪ್ರಾಬಲ್ಯ; ಅಶ್ವಿನ್​ ನಂ.1 ಬೌಲರ್; ರೋಹಿತ್​,ಗಿಲ್​, ಜೈಸ್ವಾಲ್​ ಭಾರೀ ಪ್ರಗತಿ

ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯುವಂತೆ ಮತ್ತು ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು, ಅರಣ್ಯದ ಮೂಲಕ ತಲೆ ಮೇಲೆ ಸರಕು ಹೊತ್ತು ಬರುವವರ ಬಗ್ಗೆ ಕೂಡಾ ಪರಿಶೀಲಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಗತ್ಯ ಸೂಚನೆ ನೀಡಿ, ತಪಾಸಣೆಯನ್ನು ಬಿಗಿಗೊಳಿಸಬೇಕು.

ಸಮುದ್ರದ ಮೂಲಕ ಮದ್ಯ ಸಾಗಾಟ ಮಾಡುವವರ ವಿರುದ್ದ ಜಿಲ್ಲೆಯ ಕರಾವಳಿ ಕಾವಲು ಪಡೆ ಪರಿಶೀಲಿಸಲಿದ್ದು, ಗೋವಾ ಮೂಲಕ ಜಿಲ್ಲೆಯ ಕಡೆ ಸಂಚರಿಸುವ ಅನುಮಾನಸ್ಪದ ಬೋಟುಗಳ ಬಗ್ಗೆ ಮಾಹಿತಿ ಇದ್ದಲ್ಲಿ ಹಂಚಿಕೊಳ್ಳುವಂತೆ ಹಾಗೂ ರೈಲುಗಳಲ್ಲಿ ಕೂಡಾ ಅಬಕಾರಿ ಮತ್ತು ರೈಲ್ವೆ ಪೊಲೀಸರಿಂದ ಹೆಚ್ಚಿನ ತಪಾಸಣೆ ನಡೆಸುವಂತೆ ತಿಳಿಸಿದರು.

ನಿಗಧಿತ ಮಿತಿಗಿಂತ ಹೆಚ್ಚಿನ ನಗದು ಮೊತ್ತವನ್ನು ಸಾಗಾಟ ಮಾಡುವವರ ಬಗ್ಗೆ ಹಾಗೂ ಮಾದಕ ವಸ್ತುಗಳ ಸರಬರಾಜು ಮಾಡುವವರ ವಿರುದ್ದ ಕೂಡಾ ಎರಡೂ ಜಿಲ್ಲೆಗಳ ಅಧಿಕಾರಿಗಳು ಹೆಚ್ಚಿನ ಕಟ್ಟೆಚ್ಚರ ವಹಿಸಬೇಕು, ಗೋವಾದ ರಾಜ್ಯದ ಅಧಿಕಾರಿಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್, ಅಬಕಾರಿ ಮತ್ತು ಆದಾಯ ತೆರಿಗೆ ಅಧಿಕಾರಿಗಳು ನಿರಂತರವಾಗಿ ಸಂಪರ್ಕದಲ್ಲಿದ್ದು, ಪರಸ್ಪರ ಸಮನ್ವಯದಿಂದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಮುಕ್ತ ಮತ್ತು ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಈಗಾಗಲೇ ಜಿಲ್ಲೆಯ ಅಂತರರಾಜ್ಯ ಗಡಿ ಪ್ರದೇಶವಾದ ಕಾರವಾರದ ಮಾಜಾಳಿ ಚೆಕ್‌ಪೋಸ್ಟ್, ಜೋಯಿಡಾದ ಅನ್‌ಮೋಡ್ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಕಾರವಾರದ ಮೈಂಗಿಣಿ ಚೆಕ್ ಪೋಸ್ಟ್ ಶೀಘ್ರದಲ್ಲಿ ಕಾರ್ಯರಂಭಗೊಳ್ಳಲಿದೆ ಎಂದರು.

ಇದನ್ನೂ ಓದಿ: Drown In Lake: ಆಗರ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್, ಅಬಕಾರಿ ಮತ್ತು ಅದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version