ಬನವಾಸಿ: ಇಲ್ಲಿಯ ಐತಿಹಾಸಿಕ ಮಾತೋಬರ ಶ್ರೀ ಮಧುಕೇಶ್ವರ (Sri Madhukeshwara) ದೇವಸ್ಥಾನದ ನೂತನ ಮಹಾಸ್ಯಂದನ ರಥದ ಮಹಾರಥೋತ್ಸವವು (Maharathotsava) ಗುರುವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ನೂತನ ರಥಕ್ಕೆ ವಿಶೇಷ ಪೂಜೆ ನೆರವೇರಿಸಿ, ಬಳಿಕ ಶ್ರೀ ಮಧುಕೇಶ್ವರ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು.
ಇದನ್ನೂ ಓದಿ: INDIA GDP : 2ನೇ ತ್ರೈಮಾಸಿಕದ GDP ಶೇ. 7.6 ; ಕಳೆದ ಬಾರಿಗಿಂತ ಹೆಚ್ಚಾ, ಕಡಿಮೆನಾ?
ನೂತನ ಮಹಾಸ್ಯಂದನ ರಥಕ್ಕೆ ಪೂಜೆ ಸಲ್ಲಿಸಿ ಶ್ರೀ ಉಮಾಮಧುಕೇಶ್ವರ ದೇವರ ಉತ್ಸವ ಮೂರ್ತಿಯನ್ನು ಮನ್ಮಹಾಸ್ಯಂದನ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.
ಸಂಜೆ ದೇವರಿಗೆ ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರ ಹರ್ಷೋದ್ಗಾರದ ನಡುವೆ ಶ್ರೀ ಮಧುಕೇಶ್ವರ ದೇವರ ನೂತನ ರಥದ ವೈಭವ ರಥೋತ್ಸವ ನಡೆಯಿತು.