ಕಾರವಾರ: ಪ್ರಸ್ತುತ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ (Lok Sabha Election) ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲಿದ್ದು, ಈ ಅವಧಿಯಲ್ಲಿ ದೃಶ್ಯ ಮಾಧ್ಯಮಗಳು, ಕೇಬಲ್ ಟಿವಿ, ಫೇಸ್‌ಬುಕ್, ವಾಟ್ಸಾಪ್, ಇ-ಪತ್ರಿಕೆಗಳು ಸೇರಿದಂತೆ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳಲ್ಲಿ, ಯಾವುದೇ ರಾಜಕೀಯ ಪಕ್ಷದ ಅಥವಾ ಚುನಾವಣಾ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು, ಎಂ.ಸಿ.ಎಂ.ಸಿ. ಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಡಿಸಿ ಗಂಗೂಬಾಯಿ ಮಾನಕರ್ (Uttara Kannada News) ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂ.ಸಿ.ಎಂ.ಸಿ.) ಯಿಂದ ಪೂರ್ವಾನುಮತಿ ಪಡೆಯದೇ ಜಾಹೀರಾತು ಪ್ರಸಾರ ಮಾಡುತ್ತಿರುವುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ಕಚೇರಿಯನ್ನು ತೆರೆದಿದ್ದು, ಇಲ್ಲಿ ಜಾಹೀರಾತುಗಳನ್ನು ನಿರಂತರವಾಗಿ ಪರಿಶೀಲಿಸಲು ಎಲ್ಲಾ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ಕುರಿತು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ಪರಿಶೀಲಿಸಲು ನಿರಂತರವಾಗಿ ವೀಕ್ಷಿಸಲು 3 ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದು, ಎಲ್ಲಾ ಪ್ರಮುಖ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಅದರಲ್ಲಿ ಬರುವ ಎಲ್ಲಾ ರೀತಿಯ ಕಾರ್ಯಕ್ರಮಗಳ ಬಗ್ಗೆ ಪ್ರತ್ಯೇಕ ರಿಜಿಸ್ಟರ್‌ಗಳಲ್ಲಿ ದಾಖಲು ಮಾಡುತ್ತಿರುವ ಸಿಬ್ಬಂದಿಗಳು, ಎಂಸಿಎಂಸಿಯಿಂದ ಪೂರ್ವಾನುಮತಿ ಪಡೆಯದೇ ಪ್ರಸಾರವಾಗುವ ಜಾಹೀರಾತುಗಳು ಮತ್ತು ನೀತಿ ಸಂಹಿತೆ ಉಲ್ಲಂಘನೆ ವ್ಯಾಪ್ತಿಗೆ ಬರುವ ಕಾರ್ಯಕ್ರಮಗಳ ಬಗ್ಗೆ ನೋಡೆಲ್ ಅಧಿಕಾರಿಗಳಿಗೆ ವರದಿ ನೀಡುತ್ತಿದ್ದಾರೆ.
ಇದನ್ನೂ ಓದಿ: Mukesh Ambani: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿಯನ್ನು ಹಿಂದಿಕ್ಕಿದ ಅಂಬಾನಿ; ಉಳಿದ ಸಿರಿವಂತರು ಯಾರು?
ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ, ನೀತಿ ಸಂಹಿತೆ ಉಲ್ಲಂಘನೆಯ ವರದಿಗಳು ಹಾಗೂ ಜಾಹೀರಾತುಗಳು ಪ್ರಸಾರವಾದಲ್ಲಿ ಅವುಗಳ ನಿರ್ದಿಷ್ಟ ಅವಧಿಯ ಕ್ಲಿಪಿಂಗ್‌ಗಳನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಸಲ್ಲಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಟಿವಿ ಚಾನೆಲ್‌ಗಳು ಮಾತ್ರವಲ್ಲದೇ ಜಿಲ್ಲೆಯಲ್ಲಿ ಪ್ರಕಟವಾಗುವ ಎಲ್ಲಾ ರಾಜ್ಯಮಟ್ಟದ ಮತ್ತು ಸ್ಥಳೀಯ ಎಲ್ಲಾ ದಿನಪತ್ರಿಕೆಗಳನ್ನೂ ವಿವರವಾಗಿ ಪ್ರತಿದಿನ ಪರಿಶೀಲನೆ ನಡೆಸುತ್ತಿದ್ದು, ಪ್ರತಿದಿನದ ಪತ್ರಿಕಾ ವರದಿಗಳಲ್ಲಿ ಪ್ರಕಟವಾಗುವ ಪೇಯ್ಡ್ ನ್ಯೂಸ್‌ಗಳ ಬಗ್ಗೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಮತ್ತು ಎಲ್ಲಾ ರಾಜಕೀಯ ಪ್ರಚಾರ ಕಾರ್ಯಕ್ರಮಗಳ ವರದಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಎಲ್ಲಾ ಪತ್ರಿಕಾ ವರದಿಗಳ ತುಣುಕುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ್ದು, ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Taiwan Earthquake: ಭೂಕಂಪದಿಂದ ತೈವಾನ್ ಗಡಗಡ; 4 ಸಾವು; ನಡುಕ ಹುಟ್ಟಿಸುವ ವಿಡಿಯೋಗಳು ಇಲ್ಲಿವೆ
ಸೋಷಿಯಲ್ ಮೀಡಿಯಾಗಳಲ್ಲಿ ಜಾಹೀರಾತು ಪ್ರಕಟಣೆ ಮಾತ್ರವಲ್ಲದೇ, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರದ ಕುರಿತು ಸಾರ್ವಜನಿಕರಿಗೆ ಬಲ್ಕ್ ಎಸ್.ಎಂ.ಎಸ್‌ಗಳು, ವಾಯ್ಸ್ ಮೆಸೇಜ್ ಗಳನ್ನು ಕಳುಹಿಸಲೂ ಕೂಡಾ ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಯ ಪೂರ್ವಾನುಮತಿ ಅತ್ಯಗತ್ಯವಾಗಿದೆ. ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ಕುರಿತೂ ಸಹ 24*7 ನಿಗಾವಹಿಸಲು ಸಾಮಾಜಿಕ ಮಾಧ್ಯಮ ನಿರ್ವಹಣಾ ಪರಿಣಿತರ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ.
ಜಿಲ್ಲೆಯಲ್ಲಿ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು, ಚುನಾವಣಾ ಆಯೋಗದ ಸೂಚನೆಯಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯಕ್ರಮದ ಕುರಿತು ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವ ಮುನ್ನ ಜಿಲ್ಲಾ ಎಂಸಿಎಂಸಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: Coorg Restaurants: ಬೇಸಿಗೆ ಪ್ರವಾಸಕ್ಕೆ ಹೋಗ್ತೀರಾ? ಕೊಡಗಿನ ಅತ್ಯುತ್ತಮ ರೆಸ್ಟೋರೆಂಟ್‌ಗಳ ಮಾಹಿತಿ ನಿಮಗಾಗಿ
ಜಾಹೀರಾತು ಪ್ರಕಟಣೆಗೆ ಅನುಮತಿ ಪಡೆಯುವ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿರುವ ಎಂಸಿಎಂಸಿ ಕಚೇರಿಯಿಂದ ಅರ್ಜಿ ಪಡೆದು, ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ ಜಾಹೀರಾತುಗಳ ಪ್ರಕಟಣೆಗೆ ಅನುಮತಿ ನೀಡಲಾಗುವುದು. ಅನುಮತಿ ಇಲ್ಲದೇ ಜಾಹೀರಾತುಗಳನ್ನು ಪ್ರಕಟಿಸಿದ್ದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.