ಕಾರವಾರ: ನವೆಂಬರ್ 1, 2023ಕ್ಕೆ ಕರ್ನಾಟಕ (Karnataka) ಎಂದು ಮರು ನಾಮಕರಣಗೊಂಡು 50 ವರ್ಷಗಳು (50 Years) ಪೂರ್ಣಗೊಳ್ಳುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ನವೆಂಬರ್ 1ರಂದು ವೈಶಿಷ್ಟಪೂರ್ಣ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕರ್ನಾಟಕ ಸಂಭ್ರಮ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನವೆಂಬರ್ 1 ರಂದು ಜಿಲ್ಲೆಯಾದ್ಯಂತ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಸಾರುವ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಎಲ್ಲಾದರೂ ಇರು ಎಂತಾದರೂ ಇರು, ಒಂದೇ ಒಂದೇ ಕರ್ನಾಟಕ ಒಂದೇ, ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಗೀತೆಗಳನ್ನು ಕಲಾವಿದರು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಎಲ್ಲಾ ಸರ್ಕಾರಿ ನೌಕರರು ಏಕ ಕಂಠದಲ್ಲಿ ಕಡ್ಡಾಯವಾಗಿ ಹಾಡುವ ಮೂಲಕ ಕನ್ನಡ ತಾಯಿ ಭುವನೇಶ್ವರಿಗೆ ನುಡಿ ನಮನ ಸಲ್ಲಿಸಲಾಗುವುದು.
ಈ ಕುರಿತಂತೆ ಎಲ್ಲಾ ಶಾಲಾ ಕಾಲೇಜು, ಎಲ್ಲಾ ಗ್ರಾಮ ಪಂಚಾಯಿತಿ ಸೇರಿದಂತೆ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ಎಲ್ಲಾ ಸ್ಥಳಗಳಲ್ಲಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಹಾಗೂ ಕನ್ನಡ ಗೀತೆಗಳ ಆಡಿಯೋ ಲಿಂಕ್ ಗಳನ್ನು ಎಲ್ಲರಿಗೂ ಕಳುಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Tej Cyclone: ನಾಳೆ ತೀವ್ರವಾಗಲಿದೆ ಅರಬ್ಬಿ ಸಮುದ್ರದ ‘ತೇಜ್’ ಚಂಡಮಾರುತ! ಅಪ್ಪಳಿಸುತ್ತಾ ಮುಂಬೈ ಕರಾವಳಿಗೆ?
ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮ ಪಂಚಾಯಿತಿಗಳಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ನಂತರ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಸುವಂತೆ ತಿಳಿಸಿದರು.
ಕಾರವಾರ ನಗರವು ಗಡಿಭಾಗ ಆಗಿರುವುದರಿಂದ ಇಲ್ಲಿ ಇನ್ನೂ ಹೆಚ್ಚಿನ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಕನ್ನಡ ನಾಡು ನುಡಿಯ ಹಿರಿಮೆಯ ಬಗ್ಗೆ ಕವಿಗೋಷ್ಠಿಗಳು, ಸಾಹಿತಿಗಳೊಂದಿಗೆ ಚರ್ಚೆಗಳು ಹಾಗೂ 50 ಮಂದಿ ಕಲಾವಿದರನ್ನು ಒಂದೆಡೆ ಸೇರಿಸಿ ಅವರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಕಾರವಾರದಲ್ಲಿ ವಿವಿಧ ವೈವಿಧ್ಯಮಯ ಕಲಾತಂಡಗಳೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಎಲ್ಲಾ ಕನ್ನಡಪರ ಸಂಘಟನೆಗಳು ಈ ಕಾರ್ಯಕ್ರಮಕ್ಕೆ ತಮ್ಮ ಅಗತ್ಯ ಸಹಕಾರ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಇದನ್ನೂ ಓದಿ: Ballari News: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ; ಆರೋಪಿಯ ಬಂಧನ
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ವಾಸರೆ, ಕರುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ದತ್ತಾ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಕ್ಷಯ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.