Site icon Vistara News

Uttara Kannada News: ಯುವ ನಿಧಿ ಯೋಜನೆ ನೋಂದಣಿ ಗುರಿ ಸಾಧಿಸಿ: ಡಿಸಿ ಗಂಗೂಬಾಯಿ ಮಾನಕರ್

Meeting on Yuva nidhi Scheme Registration at Karwar

ಕಾರವಾರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಯೋಜನೆಯಲ್ಲಿ (Yuva Nidhi Scheme) ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ನೊಂದಣಿ ಮಾಡಿ, ಯೋಜನೆಯ ಸೌಲಭ್ಯವನ್ನು ಒದಗಿಸುವಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ, ಯುವನಿಧಿ ಯೋಜನೆಯ ನೋಂದಣಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 2022-23 ರಲ್ಲಿ ಪದವಿ/ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳು (ಅಂದರೆ 2023ನೇ ವರ್ಷದಲ್ಲಿ ಉತ್ತೀರ್ಣರಾದವರು) ಯುವ ನಿಧಿ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಅರ್ಹರಾಗಿದ್ದು, ಪದವೀಧರರಿಗೆ ರೂ.3000 ಹಾಗೂ ಡಿಪ್ಲೊಮಾ ತೇರ್ಗಡೆಯಾದವರಿಗೆ ರೂ.1500 ರೂ ಗಳ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ವರೆಗೆ ನೀಡುವ ಯುವನಿಧಿ ಯೋಜನೆಯ ಕುರಿತಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು, ತಾಲೂಕುಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಅರಿವು ಮೂಡಿಸುವುದರ ಜತೆಗೆ ಜಿಲ್ಲೆಯ ಗರಿಷ್ಠ ಸಂಖ್ಯೆಯ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಇದನ್ನೂ ಓದಿ: WTC 2023-25 Points Table: ಆರರಿಂದ ಅಗ್ರಸ್ಥಾನಕ್ಕೇರಿದ ಟೀಮ್​ ಇಂಡಿಯಾ

ಜಿಲ್ಲೆಯಲ್ಲಿ 32 ಪದವಿ ಕಾಲೇಜುಗಳು ಹಾಗೂ 8 ಡಿಪ್ಲೊಮಾ ಕಾಲೇಜುಗಳಿದ್ದು, ಈ ಸಂಸ್ಥೆಗಳಲ್ಲಿ 2022-23 ರಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ದೂರವಾಣಿ ಮೂಲಕ ಸಂಪರ್ಕಿಸಿ, ಯೋಜನೆಯ ಬಗ್ಗೆ ಮಾಹಿತಿ ನೀಡಿ ನೊಂದಣಿ ಮಾಡುವಂತೆ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗಳು, ತಹಸೀಲ್ದಾರ್ ಕಚೇರಿಗಳ ವ್ಯಾಪ್ತಿಯಲ್ಲಿ ಯೋಜನೆಯ ಕುರಿತಂತೆ ಪ್ರಚಾರ ಫಲಕಗಳನ್ನು ಅಳವಡಿಸುವುದರ ಜತೆಗೆ, ಸೋಷಿಯಲ್ ಮೀಡಿಯಗಳ ಮೂಲಕ ಸಹ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ತಿಳಿಸಿದರು.

ಜನವರಿ 12ಕ್ಕೆ ಯುವನಿಧಿ ಯೋಜನೆಯು ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗಲಿದ್ದು, ಅಂದು ರಾಜ್ಯದಲ್ಲಿ ನೊಂದಣಿ ಮಾಡಿರುವ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದ್ದು , ಜಿಲ್ಲೆಯಲ್ಲಿ ಇದುವರೆಗೆ 752 ಮಂದಿ ಮಾತ್ರ ಯೋಜನೆಗೆ ನೊಂದಣಿ ಮಾಡಿದ್ದು, ಜಿಲ್ಲೆಯ ಅರ್ಹ ಎಲ್ಲಾ ಫಲಾನುಭವಿಗಳಿಗೂ ಈ ಯೋಜನೆಯ ಪ್ರಯೋಜನ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವಂತೆ ಹೇಳಿದರು.

ಇದನ್ನೂ ಓದಿ: Folk Museum: ಮೈಸೂರಿನ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯ ಸಂರಕ್ಷಣೆ; ಯು.ಎಸ್. ಮಿಷನ್‍ ಬೆಂಬಲ

ಈ ಯೋಜನೆಗೆ ಅಭ್ಯರ್ಥಿಗಳು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಪದವಿ/ಡಿಪ್ಲೋಮಾ ಪಡೆದವರು, ಕನಿಷ್ಠ 6 ವರ್ಷ ರಾಜ್ಯದ ನಿವಾಸಿಗಳಾಗಿರುವವರು ಮಾತ್ರ ಅರ್ಹರಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ/ ಡಿಪ್ಲೊಮಾ ಉತ್ತೀರ್ಣದ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿದ್ದು, ಯೋಜನೆಯ ನೊಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದರು.

ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಂಸ್ಥೆಯಲ್ಲಿ 2022-23 ರಲ್ಲಿ ಪದವಿ/ಡಿಪ್ಲೊಮಾ ಪಡೆದ ವಿದ್ಯಾರ್ಥಿಗಳಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಯುವಜನತೆಗೆ ಇದರ ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಪಟ್ಟ ಆಧಿಕಾರಿಗಳಿಗೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಅರ್ಹ ಎಲ್ಲಾ ಪದವಿ/ಡಿಪ್ಲೋಮಾ ಪದವೀಧರರು ಸರ್ಕಾರದ ಯೋಜನೆಯ ನೆರವು ಪಡೆಯುವಂತೆ ತಿಳಿಸಿದರು.

ಇದನ್ನೂ ಓದಿ: Viral News: ಅಮ್ಮಾ ನಿನ್ನ ತೋಳಿನಲ್ಲಿ… ತಾಯಿಯ ಬೆಚ್ಚನೆ ಅಪ್ಪುಗೆಯಲ್ಲಿರುವ ಮರಿ ಆನೆಯ ಫೋಟೊ ವೈರಲ್‌

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಉದ್ಯೋಗಾಧಿಕಾರಿ ವಿನೋದ್ ನಾಯ್ಕ, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಡಿ.ಟಿ,ನಾಯ್ಕ , ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಯಂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version