ಕಾರವಾರ: ಗ್ರಾಮ ಪಂಚಾಯಿತಿಗಳಲ್ಲಿನ (Gram Panchayat) ವಸತಿ ರಹಿತ ಫಲಾನುಭವಿಗಳ ಪಟ್ಟಿ ಮಾಡಿ ಪಂಚಾಯಿತಿಯಲ್ಲಿ ಠರಾವು ಮಾಡಿ, ವರದಿಯನ್ನು ನೀಡಿದಲ್ಲಿ ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿಸುವ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಆ್ಯಂಡ್ ಏಜೆನ್ಸೀಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ. ಸೈಲ್ (Uttara Kannada News) ತಿಳಿಸಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಬಸವ ವಸತಿ ಯೋಜನೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಇದನ್ನೂ ಓದಿ: water crisis: ಕರ್ನಾಟಕಕ್ಕೆ ಜಲಾಘಾತ! ಹಳ್ಳಿ ಹಳ್ಳಿಯಲ್ಲಿ ನೀರಿಲ್ಲ; ಖಾಸಗಿ ಬೋರ್‌ವೆಲ್‌ನಿಂದ ಪೂರೈಕೆಗೆ ಸರ್ಕಾರ ಸೂಚನೆ
ಕಾರವಾರ ತಾಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ, ಬಸವ ಯೋಜನೆಯಡಿ 486 ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಯೋಜನೆಯಡಿ 13 ಸೇರಿದಂತೆ ಒಟ್ಟು 499 ಫಲಾನುಭವಿಗಳು 2022-23ನೇ ಸಾಲಿನಲ್ಲಿ ಆಯ್ಕೆಯಾಗಿದ್ದು, ಆಯ್ಕೆಯಾಗಿರುವ ಎಲ್ಲಾ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ಹಂತ ಹಂತವಾಗಿ ಸಹಾಯಧನ ಬಿಡುಗಡೆಯಾಗಲಿದ್ದು, ಬಹುದಿನಗಳ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ಸಾಕಾರಗೊಳಿಸಿಕೊಳ್ಳುವಂತೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಬಡ ಜನರಿಗೆ ವಸತಿ ಯೋಜನೆಯಡಿ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದ ಅವರು, ಅಭಿವೃದ್ಧಿ ಹಾಗೂ ಬಡ ಜನರ ಕೆಲಸಗಳನ್ನು ಮಾಡುವಾಗ ಪಕ್ಷಭೇದ ಮರೆತು ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಇದೇ ವೇಳೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರ ಸಮಸ್ಯೆಗಳನ್ನು, ಅಹವಾಲುಗಳನ್ನು ಆಲಿಸಿದರು.
ಇದನ್ನೂ ಓದಿ: Shivamogga News: ಹೊಟ್ಟಕೇರಿ ಕೆರೆಯಲ್ಲಿ ನೂರಾರು ಮೀನುಗಳ ಸಾವು
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇಒ ಈರಣ್ಣಗೌಡ, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.