Site icon Vistara News

Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್ ಭೇಟಿ

MLA Satish Sail visited the flood affected areas of Karwar taluk

ಕಾರವಾರ: ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್, ಸೋಮವಾರ ಭೇಟಿ ನೀಡಿ, ಪರಿಶೀಲನೆ (Uttara Kannada News) ನಡೆಸಿದರು.

ದೇವಭಾಗದ ಕಡಲ ಕೊರೆತ ಸ್ಥಳ ಪರಿಶೀಲಿಸಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ದೇವಭಾಗದಿಂದ ಮಾಜಾಳಿವರೆಗೆ ಅಂದಾಜು 8 ರಿಂದ 15 ಕೋಟಿ ವೆಚ್ವದಲ್ಲಿ ರಸ್ತೆ ನಿರ್ಮಾಣವಾಗಿದ್ದು, ತಡೆಗೋಡೆ ಕಾಮಗಾರಿ ಮಾಡದ ಕಾರಣ ಸಮುದ್ರದ ನೀರು ರಸ್ತೆ ದಾಟಿ ಮನೆಗಳಿಗೆ ನುಗ್ಗುತ್ತಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಬಿಡುಗಡೆಯಾದ 10 ಕೋಟಿ ರೂ. ಗಳನ್ನು 2022ನೇ ಸಾಲಿನಲ್ಲಿ ಸರ್ಕಾರ ಹಿಂದೆ ಪಡೆದಿದ್ದು, ಬಂದರು ಇಲಾಖೆಯಿಂದ ವರದಿ ಪಡೆದುಕೊಂಡು 10 ಕೋಟಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಗುವುದು ಎಂದರು.

ಮಾಜಾಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಂದರು ಕಾಮಗಾರಿಯನ್ನು ಮೀನುಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಬೇಕು. ಸ್ಥಳೀಯ ಮೀನುಗಾರರ ದೋಣಿ ನಿಲ್ಲಿಸಲು ಸೂಕ್ತ ರ‍್ಯಾಂಪ್ ವ್ಯವಸ್ಥೆ ಮಾಡುವಂತೆ ಹಾಗೂ ಪ್ರವಾಸೋದ್ಯಮ ಉದ್ದೇಶದಿಂದ ಗೋವಾ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಿಳಮಾತಿ ಕಡಲತೀರವನ್ನು ಅಭಿವೃದ್ಧಿ ಪಡಿಸಲು ಈ ಹಿಂದೆ ನಬಾರ್ಡ್‌ನಲ್ಲಿ ಓಂ ಆಕಾರದಲ್ಲಿ ನೀಲನಕ್ಷೆ ಸಿದ್ದಪಡಿಸಿ ಅನುಮೋದನೆ ಪಡೆದಿದ್ದರೂ, ಕಾಮಗಾರಿ ಆರಂಭವಾಗದೇ ಹಾಗೇ ಉಳಿದುಕೊಂಡಿದ್ದು, ಈಗ ಪುನಃ ತಿಳಮಾತಿ ಸಂಪರ್ಕಿಸಲು ತೂಗು ಸೇತುವೆ ಸೇರಿದಂತೆ ಈ ಹಿಂದೆ ರೂಪಿಸಿರುವ ನೀಲನಕ್ಷೆಯಂತೆ ಕಾಮಗಾರಿ ಕೈಗೊಳ್ಳಲು ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: CM Siddaramaiah: ಕ್ವಾರಿ ಗಣಿ ರಾಯಲ್ಟಿಯಲ್ಲಿ ಸರ್ಕಾರಕ್ಕೆ ವಂಚನೆ; ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಕೆರವಡಿಯ ಸೇತುವೆ ಹಾಗೂ ಗೋಕರ್ಣ ಮತ್ತು ಅಂಕೋಲಾ ಸಂಪರ್ಕಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ಮಂಜಗುಣಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ನಿಶ್ಚಲ್ ನರೋನಾ, ಬಂದರು ಇಲಾಖೆ ಇಇ ರಾಜಕುಮಾರ್, ಇತರರು ಇದ್ದರು.

ಇದನ್ನೂ ಓದಿ: Job Alert: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 6128 ಹುದ್ದೆ; ಪರೀಕ್ಷೆ ಸ್ವರೂಪ ಹೇಗಿರುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ?

ನಂತರ ಕದ್ರಾ ಡ್ಯಾಂ ಗೆ ತೆರಳಿದ ಶಾಸಕರು, ಡ್ಯಾಂ ತುಂಬಿದ ಹಿನ್ನಲೆ ಬಾಗೀನ ಅರ್ಪಿಸಿದ್ದು, ಈ ಹಿಂದೆ ನಡೆದ ಅವಘಡಗಳು ಮತ್ತೆ ಮರುಕಳಿಸದಂತೆ ಮಹಾಮಾಯಿ ಮತ್ತು ಕ್ಷೇತ್ರದ ದೇವತೆಗಳಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ನಂತರ ಡ್ಯಾಮ್‌ನ 4 ಗೇಟ್‌ಗಳಿಂದ 10,600 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದನ್ನು ವೀಕ್ಷಣೆ ಮಾಡಿದರು. ಈ ವೇಳೆ ತಹಸೀಲ್ದಾರ್‌ ನಿಶ್ಚಲ್ ನರೋನಾ, ಕೆಪಿಸಿಎಲ್ ಅಧಿಕಾರಿಗಳು, ಕದ್ರಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮವ್ವ ಹಾಗೂ ಇತರರು ಇದ್ದರು.

Exit mobile version