ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರ (Principal) ವರ್ಗಾವಣೆಗೆ ಒತ್ತಾಯಿಸಿ, ವಿದ್ಯಾರ್ಥಿಗಳು (Students) ಮುಂದುವರಿಸಿದ್ದ ಮೌನ ಪ್ರತಿಭಟನೆಯನ್ನು (Silent Protest) ಮೊಟಕುಗೊಳಿಸಿ, ವಿದ್ಯಾರ್ಥಿಗಳನ್ನು ತರಗತಿಗೆ ತೆರಳುವಂತೆ ಮನವೊಲಿಸುವಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಯಶಸ್ವಿಯಾಗಿದ್ದಾರೆ.
ಕಾಲೇಜಿನ ಪ್ರಭಾರಿ ಪ್ರಾಂಶುಪಾಲೆ ಭವ್ಯ ಸಿ. ವಿದ್ಯಾರ್ಥಿಗಳೊಂದಿಗೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು, ಅವರ ವರ್ಗಾವಣೆಗೆ ಒತ್ತಾಯಿಸಿ ಶನಿವಾರ ಮೌನ ಪ್ರತಿಭಟನೆ ಆರಂಭಿಸಿದ್ದರು. ದಸರಾ ರಜೆಯ ನಂತರ ಬುಧವಾರ ಮತ್ತೆ ಪ್ರತಿಭಟನೆ ಮುಂದುವರೆಸಿದ್ದ ವಿದ್ಯಾರ್ಥಿಗಳೊಂದಿಗೆ ಹಾಗೂ ಕಾಲೇಜಿನ ಪ್ರಾಂಶುಪಾಲೆ ಮತ್ತು ಉಪನ್ಯಾಸಕರೊಂದಿಗೆ ಪ್ರತ್ಯೇಕವಾಗಿ ಶಾಸಕ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಕಾಲೇಜು ಅಭಿವೃದ್ದಿ ಮಂಡಳಿಯ ಸದಸ್ಯರು ಚರ್ಚೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.
ಇದನ್ನೂ ಓದಿ: Reliance Jio: 9 ಪ್ರಶಸ್ತಿ ಗೆದ್ದ ರಿಲಯನ್ಸ್ ಜಿಯೋ! ಅಪ್‌ಲೋಡ್, ಡೌನ್‌ಲೋಡ್ ವೇಗದಲ್ಲಿ ನಂಬರ್ 1
ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, ನಿಮ್ಮ ಮನವಿಯನ್ನು ನಾವು ಪರಿಶೀಲಿಸುತ್ತೇವೆ. ಕಾಲೇಜಿನಲ್ಲಿ ತರಗತಿಗಳು ಸರಿಯಾಗಿ ನಡೆಯಲು ಅವಶ್ಯವಿರುವ ಕ್ರಮವನ್ನು ಕೈಗೊಳ್ಳಲಾಗುವುದು. ಇಂತಹ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದು ಸರಿಯಲ್ಲ. ಸ್ಥಳಕ್ಕೆ ಶಿಕ್ಷಣ ಇಲಾಖೆಯ ಜೆ. ಡಿ. ಅವರು ಆಗಮಿಸಿದ್ದಾರೆ. ಅವರ ವರದಿಯನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರತಿಭಟನೆಯಿಂದ ಶಿಕ್ಷಣ ವಂಚಿತರಾಗುವ ಬದಲು, ಸಮಸ್ಯೆಗಳನ್ನು ಕಾಲೇಜು ಅಭಿವೃದ್ಧಿ ಮಂಡಳಿಯ ಗಮನಕ್ಕೆ ತಂದು, ತರಗತಿಯನ್ನು ಆಲಿಸಿ. ಮುಂದಿನ ಕ್ರಮ ಕೈಗೊಳ್ಳುವ ನಿರ್ಧಾರವನ್ನು ನಮ್ಮ ಮೇಲೆ ಬಿಡಿ ಎಂದು ವಿದ್ಯಾರ್ಥಿಗಳಿಗೆ ಮನವೊಲಿಸಿದರು.
ಇದನ್ನೂ ಓದಿ: Makeup Awareness: ಫೆಸ್ಟಿವ್ ಸೀಸನ್ ಮೇಕಪ್‌ಗೆ ಬ್ರೇಕ್ ನೀಡಿ! ತ್ವಚೆ ರಿಲ್ಯಾಕ್ಸ್ ಆಗಲು ಬಿಡಿ
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ವಿಜಯ ಮಿರಾಶಿ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಸುನಂದಾ ದಾಸ, ಉಲ್ಲಾಸ ಶಾನಭಾಗ, ರಾಜು ಬದ್ಧಿ ಉಪಸ್ಥಿತರಿದ್ದರು.